ಎಲ್ಲಾ ರಿಪಬ್ಲಿಕನರು ತೀವ್ರವಾದಿಗಳು: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್ (Photo - PTI)
ವಾಷಿಂಗ್ಟನ್, ಆ.24: ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಗಳನ್ನು `ತೀವ್ರವಾದಿಗಳು' ಎಂದು ಬಣ್ಣಿಸಿರುವ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದ ಪ್ರಥಮ ಅಧ್ಯಕ್ಷೀಯ ಚರ್ಚೆಯಲ್ಲಿ ಭಾಗವಹಿಸಿದ್ದವರು ದೇಶವನ್ನು ನ್ಯಾಯೋಚಿತ ಮತ್ತು ಸುರಕ್ಷಿತವಾಗಿ ಇರಿಸುವ ಕುರಿತು ಯಾವುದೇ ಕಾರ್ಯಸೂಚಿಯನ್ನು ಹೊಂದಿಲ್ಲ ಎಂದು ಟೀಕಿಸಿದ್ದಾರೆ.
ವಿಸ್ಕಾನ್ಸಿನ್ನಲ್ಲಿ ಬುಧವಾರ ನಡೆದ ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚೆಯ ಕುರಿತು ಪ್ರತಿಕ್ರಿಯಿಸಿರುವ ಹ್ಯಾರಿಸ್ `ಇವತ್ತಿನ ಚರ್ಚೆಯಲ್ಲಿ ಪಾಲ್ಗೊಂಡವರು ಯಾರೂ ಮೇಲುಗೈ ಸಾಧಿಸಿಲ್ಲ. ಬದಲಾಗಿ, ತೀವ್ರವಾದಿ ಅಜೆಂಡಾದಿಂದ ತಮಗೆ ಆಗಲಿರುವ ಹಾನಿಯ ಬಗ್ಗೆ ಅಮೆರಿಕನ್ ಜನತೆ ತಿಳಿದುಕೊಂಡರು' ಎಂದಿದ್ದಾರೆ. ಬುಧವಾರ ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚೆಯಲ್ಲಿ ಪಾಲ್ಗೊಂಡವರಲ್ಲಿ ಭಾರತೀಯ ಮೂಲದವರಾದ ನಿಕ್ಕಿ ಹ್ಯಾಲೆ ಹಾಗೂ ವಿವೇಕ್ ರಾಮಸ್ವಾಮಿ ಸೇರಿದ್ದಾರೆ.
`ಒಬ್ಬರಾದ ಮೇಲೆ ಮತ್ತೊಬ್ಬರಂತೆ ತೀವ್ರವಾದಿ ರಿಪಬ್ಲಿಕನ್ ಅಭ್ಯರ್ಥಿಗಳು ಪ್ರಸ್ತುತ ಪಡಿಸಿದ ಅಮೆರಿಕ ಕುರಿತ ದೃಷ್ಟಿಕೋನವು ಕಡಿಮೆ ನ್ಯಾಯೋಚಿತ, ಕಡಿಮೆ ಸುರಕ್ಷಿತದ ಅಂಶವನ್ನು ಒಳಗೊಂಡಿತ್ತು. ವಿಶೇಷ ಹಿತಾಸಕ್ತಿಗಳಿಗೆ ಹಾಗೂ ಅತೀ ಶ್ರೀಮಂತರಿಗೆ ಅನುಕೂಲವಾಗುವಂತೆ ದುಡಿಯುವ ಕುಟುಂಬಗಳಿಗೆ ವೆಚ್ಚವನ್ನು ಹೆಚ್ಚಿಸಲು ಬಯಸುತ್ತಾರೆ. ಸಾಮಾಜಿಕ ಭದ್ರತೆ ಮತ್ತು ವೈದ್ಯಕೀಯ ಸುರಕ್ಷೆಯ ರಕ್ಷೆಯಿಂದ ಹೊರಗಿರಿಸಲು, ಕೋಟ್ಯಾಂತರ ಜನರ ಮೂಲಭೂತ ಹಕ್ಕುಗಳು ಹಾಗೂ ಮೂಲ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಸಿದ್ದಾರೆ' ಎಂದು ಕಮಲಾ ಹ್ಯಾರಿಸ್ ವಾಗ್ದಾಳಿ ನಡೆಸಿದ್ದಾರೆ.
13 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ನೆರವಾದ, ದಾಖಲೆ ಪ್ರಮಾಣದ ಸಣ್ಣ ಉದ್ದಿಮೆಗಳ ಸೃಷ್ಟಿ, ನಿರುದ್ಯೋಗ ಕುಸಿತ ಇತ್ಯಾದಿಗಳಿಗೆ ಕಾರಣವಾದ `ಬೈಡನ್ ಇಕನಾಮಿಕ್ಸ್' ಕಾರ್ಯತಂತ್ರವನ್ನು ಹಿಮ್ಮೆಟ್ಟಿಸುವುದು ಇವರ ಕಾರ್ಯಸೂಚಿಯಾಗಿದೆ. ನಮ್ಮ ದೇಶವನ್ನು ವಿಭಜಿಸುವುದು ಈ ತೀವ್ರವಾದಿಗಳ ಅಂತಿಮ ಉದ್ದೇಶವಾಗಿದೆ' ಎಂದವರು ಟೀಕಿಸಿದ್ದಾರೆ.