ಪಾಕ್ ಚುನಾವಣಾ ಅಕ್ರಮ ಆರೋಪ ; ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ
Photo : livemint.com
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ನಡೆದಿದ್ದ ಚುನಾವಣೆಯ ಸಂದರ್ಭ ನ್ಯಾಯಾಂಗ ಮತ್ತು ಉನ್ನತ ಚುನಾವಣಾ ಅಧಿಕಾರಿಗಳು ಒಳಗೊಂಡಿರುವ ವ್ಯಾಪಕ ಅಕ್ರಮ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಡಿದ ಆರೋಪಗಳನ್ನು ತನಿಖೆ ನಡೆಸಲು ಪಾಕಿಸ್ತಾನದ ಚುನಾವಣಾ ಆಯೋಗವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಚುನಾವಣೆಯ ಫಲಿತಾಂಶಗಳನ್ನು ನವಾಝ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷದ ಪರವಾಗಿ ತಿರುಚಲಾಗಿದೆ ಎಂದು ರಾವಲ್ಪಿಂಡಿಯ ಮಾಜಿ ಆಯುಕ್ತ ಲಿಯಾಕತ್ ಆಲಿ ಚಟ್ಟಾ ಆರೋಪಿಸಿದ್ದರು. ಚುನಾವಣಾ ಅಕ್ರಮದಲ್ಲಿ ಮುಖ್ಯ ಚುನಾವಣಾಧಿಕಾರಿ ಮತ್ತು ಮುಖ್ಯ ನ್ಯಾಯಾಧೀಶರು ಶಾಮೀಲಾಗಿದ್ದಾರೆ. ಚುನಾವಣೆಯಲ್ಲಿ ಸೋಲು ಅನುಭವಿಸಲಿದ್ದ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಲಾಗಿದೆ. ಚುನಾವಣಾ ಫಲಿತಾಂಶವನ್ನು ತಿರುಚಿದ ಪ್ರಕರಣದ ಹೊಣೆ ಹೊತ್ತು ತನ್ನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಲಿಯಾಕತ್ ಆಲಿ ಶನಿವಾರ ಘೋಷಿಸಿದ್ದರು.
ಚುನಾವಣೆಯಲ್ಲಿ ಹಾಗೂ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ಇಮ್ರಾನ್ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯಕರ್ತರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಲಿಯಾಕತ್ ಆಲಿ ಅವರೂ ಚುನಾವಣಾ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದರು. ಈ ಮಧ್ಯೆ, ಲಿಯಾಕತ್ ಆಲಿ ಅವರ ಆರೋಪವನ್ನು ಪಾಕ್ ಚುನಾವಣಾ ಆಯೋಗ ತಳ್ಳಿಹಾಕಿದೆ. ಸುದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಆಯೋಗದ ವಕ್ತಾರರು `ಚುನಾವಣೆಯ ಫಲಿತಾಂಶವನ್ನು ತಿರುಚಲಾಗಿದೆ ಮತ್ತು ಇದರಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಶಾಮೀಲಾಗಿದ್ದಾರೆ ಎಂಬ ಆರೋಪ ಆಧಾರ ರಹಿತವಾಗಿದೆ. ಚುನಾವಣಾ ಫಲಿತಾಂಶವನ್ನು ತಿರುಚುವಂತೆ ಆಯೋಗ ಯಾವುದೇ ಅಧಿಕಾರಿಗೆ ಸೂಚಿಸಿಲ್ಲ' ಎಂದಿದ್ದಾರೆ. ಲಿಯಾಕತ್ ಸ್ಥಾನಕ್ಕೆ ಹೊಸದಾಗಿ ನೇಮಕಗೊಂಡಿರುವ ರಾವಲ್ಪಿಂಡಿ ಆಯುಕ್ತ ಸೈಫ್ ಅನ್ವರ್ ಕೂಡಾ ಚುನಾವಣಾ ಆಯೋಗದ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಪಿಟಿಐ ಜತೆಗೆ, ಜೆಯುಐ-ಎಫ್ ಮತ್ತು ಜಿಡಿಎ ಪಕ್ಷಗಳೂ ಚುನಾವಣೆಯಲ್ಲಿ ಅಕ್ರಮ ನಡೆದಿರುವುದಾಗಿ ಆರೋಪಿಸಿವೆ.