ಅಮೆರಿಕ | 1 ದಶಲಕ್ಷ ಎಕರೆ ಪ್ರದೇಶ ಸುಟ್ಟುಹಾಕಿದ ಕಾಡ್ಗಿಚ್ಚು
ಉರಿಯುತ್ತಿದ್ದ ಕಾರನ್ನು ಒಣಹುಲ್ಲಿಗೆ ದೂಡಿದ ದುಷ್ಕರ್ಮಿ
PC : PTI
ವಾಷಿಂಗ್ಟನ್ : ಅಮೆರಿಕದ ವಾಷಿಂಗ್ಟನ್ ಮತ್ತು ಒರೆಗಾನ್ ರಾಜ್ಯದಲ್ಲಿ ಸುಂಟರಗಾಳಿಯಿಂದಾಗಿ ತೀವ್ರಗತಿಯಲ್ಲಿ ಹರಡುತ್ತಿರುವ ಕಾಡ್ಗಿಚ್ಚು ಇದುವರೆಗೆ ಸುಮಾರು 1 ದಶಲಕ್ಷ ಎಕರೆ ಪ್ರದೇಶವನ್ನು ಸುಟ್ಟು ಹಾಕಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಜುಲೈ 17ರಂದು ಸಿಡಿಲು ಬಡಿದು ಹೊತ್ತಿಕೊಂಡ ಕಾಡ್ಗಿಚ್ಚು ಗಂಟೆಗೆ 97 ಕಿ.ಮೀ ವೇಗದ ಗಾಳಿಯಿಂದ ಕ್ಷಿಪ್ರಗತಿಯಲ್ಲಿ ಹರಡಿದೆ. ಒರೆಗಾನ್ ರಾಜ್ಯದ ಹಂಟಿಂಗ್ಟಡನ್ ನಗರದ ಸುಮಾರು 1,553 ಚದರ ಕಿ.ಮೀ ಪ್ರದೇಶಕ್ಕೆ (ರ್ಹೋಡ್ಸ್ ದ್ವೀಪದ ಅರ್ಧಾಂಶದಷ್ಟು ) ಆವರಿಸಿದ್ದು ನೂರಾರು ಜಾನುವಾರುಗಳು ಸಾವನ್ನಪ್ಪಿವೆ. ಇದುವರೆಗೆ 20%ದಷ್ಟು ಕಾಡ್ಗಿಚ್ಚು ಮಾತ್ರ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಕಿಡಿಗೇಡಿಯೊಬ್ಬನ ಕೃತ್ಯದಿಂದ ಪ್ರಾರಂಭಗೊಂಡಿರುವ ಕಾಡ್ಗಿಚ್ಚು ತೀವ್ರವಾಗಿ ಹರಡುತ್ತಿದ್ದು 4000ಕ್ಕೂ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಕಾರನ್ನು ಓರ್ವ ವ್ಯಕ್ತಿ ಒಣಹುಲ್ಲಿನ ರಾಶಿಯ ಮೇಲೆ ದೂಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ಶುಕ್ರವಾರ ಬೆಳಗ್ಗಿನವರೆಗಿನ ಮಾಹಿತಿಯಂತೆ ಬೆಂಕಿ 1,64,200 ಎಕರೆ ಪ್ರದೇಶಕ್ಕೆ ವಿಸ್ತರಿಸಿದೆ ಎಂದು ಕ್ಯಾಲಿಫೋರ್ನಿಯಾದ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ಹೇಳಿದೆ.