ಅಮೆರಿಕದ ಸುವರ್ಣಯುಗ ಈಗಷ್ಟೇ ಪ್ರಾರಂಭವಾಗಿದೆ: ಟ್ರಂಪ್
ಸಂಸತ್ತನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷರ ಭಾಷಣ

ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಅಮೆರಿಕದ ಸುವರ್ಣ ಯುಗ ಈಗಷ್ಟೇ ಪ್ರಾರಂಭವಾಗಿದ್ದು ಅಮೆರಿಕನ್ನರು ಅದ್ಭುತ ಭವಿಷ್ಯಕ್ಕಾಗಿ ಸನ್ನದ್ಧರಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ` ಆಧುನಿಕ ಇತಿಹಾಸದಲ್ಲಿ ಮೊದಲ ಬಾರಿಗೆ, ನಮ್ಮ ದೇಶವು ತಪ್ಪು ದಿಕ್ಕಿನಿಂದ ಸರಿಯಾದ ದಿಕ್ಕಿನೆಡೆ ಸಾಗುತ್ತಿದೆ ಎಂದು ಹೆಚ್ಚಿನ ಅಮೆರಿಕನ್ನರು ನಂಬುತ್ತಾರೆ' ಎಂದರು. ಟ್ರಂಪ್ ಭಾಷಣದ ಪ್ರಮುಖ ಅಂಶಗಳು:
► ರಶ್ಯ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಶಾಂತಿ ಮಾತುಕತೆಗೆ ಸಿದ್ಧವಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ಯುದ್ಧ ಅಂತ್ಯಗೊಳ್ಳುವ ನಿರೀಕ್ಷೆಯಿದೆ.
► ಅಂತರಾಷ್ಟ್ರೀಯ ಜಗತ್ತಿನ ಭದ್ರತೆಗಾಗಿ, ರಾಷ್ಟ್ರೀಯ ಭದ್ರತೆಗಾಗಿ ನಮಗೆ ಗ್ರೀನ್ಲ್ಯಾಂಡ್ನ ಅಗತ್ಯವಿದೆ ಮತ್ತು ನಾವದನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದೆ. ತಮ್ಮ ಭವಿಷ್ಯವನ್ನು ನಿರ್ಧರಿಸುವ ಗ್ರೀನ್ಲ್ಯಾಂಡ್ ನಾಗರಿಕರ ಹಕ್ಕನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ಅವರು ಬಯಸಿದರೆ ನಾವು ಅವರನ್ನು ಅಮೆರಿಕಕ್ಕೆ ಸ್ವಾಗತಿಸುತ್ತೇವೆ.
► ಗಾಝಾದಿಂದ ಒತ್ತೆಯಾಳುಗಳನ್ನು ಮರಳಿ ತರಲು ಕೆಲಸ ಮಾಡುತ್ತಿದ್ದೇನೆ. ನನ್ನ ಮೊದಲ ಅವಧಿಯಲ್ಲಿ ಸಹಿ ಹಾಕಲಾದ ಅಬ್ರಹಾಂ ಒಪ್ಪಂದಗಳ ಬಗ್ಗೆ ನಮ್ಮ ಆಡಳಿತ ಗಮನ ಹರಿಸುತ್ತಿದೆ.
► ಗಡಿ ಭದ್ರತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಂಸತ್ತು ಕಾನೂನುಗಳನ್ನು ಅಂಗೀಕರಿಸಬೇಕು. ಈ ಬೆದರಿಕೆಗಳನ್ನು ಹೇಗೆ ತೊಡೆದು ಹಾಕುತ್ತೇವೆ, ನಮ್ಮ ತಾಯ್ನಾಡನ್ನು ಹೇಗೆ ರಕ್ಷಿಸುತ್ತೇವೆ ಮತ್ತು ಅಮೆರಿಕದ ಇತಿಹಾಸದಲ್ಲೇ ಅತೀ ದೊಡ್ಡ ಗಡೀಪಾರು ಕಾರ್ಯಾಚರಣೆಯನ್ನು ಹೇಗೆ ಪೂರ್ಣಗೊಳಿಸುತ್ತೇವೆ ಎಂಬ ವಿವರವಾದ ಮಾಹಿತಿಯನ್ನು ಧನಸಹಾಯ ಕೋರಿಕೆಯ ಜೊತೆ ಸಂಸತ್ತಿಗೆ ಕಳುಹಿಸಲಾಗಿದೆ.
► ಸುಂಕ ಎಂಬುದು ಅತ್ಯಂತ ಸುಂದರವಾದ ಪದವಾಗಿದ್ದು ಇದು ಅಮೆರಿಕವನ್ನು ಮತ್ತೆ ಶ್ರೀಮಂತ, ಮಹಾನ್ ದೇಶವನ್ನಾಗಿಸಲಿದೆ. ಕೆಲವೊಂದು ಗೊಂದಲ ಇರಬಹುದು. ಆದರೆ ಅದೆಲ್ಲಾ ಕ್ರಮೇಣ ಸರಿಯಾಗುತ್ತದೆ.
► ಹೊಸದಾಗಿ ರೂಪಿಸಿದ ಗೋಲ್ಡ್ ಕಾರ್ಡ್ ವೀಸಾಗಳು ಅತೀ ಶೀಘ್ರದಲ್ಲಿ ಮಾರಾಟಕ್ಕೆ ಸಿದ್ಧವಾಗಲಿದ್ದು ಈ ವ್ಯವಸ್ಥೆಯು ಅಮೆರಿಕದ ಸಾಲವನ್ನು ಇಳಿಸಲು ನೆರವಾಗಲಿದೆ.
ಸಾರ್ವಜನಿಕ ಶಾಲೆಗಳಲ್ಲಿ ತೃತೀಯಲಿಂಗಿ ಸಿದ್ಧಾಂತವನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶವನ್ನು ಟ್ರಂಪ್ ಘೋಷಿಸಿದ್ದು ಅಪ್ರಾಪ್ತ ವಯಸ್ಕರಿಗೆ ಲಿಂಗ ಬದಲಾವಣೆಯನ್ನು ಅಪರಾಧೀಕರಿಸುವಂತೆ ಸಂಸತ್ತನ್ನು ಆಗ್ರಹಿಸಿದ್ದಾರೆ. ಒಂದು ಗಂಟೆ 40 ನಿಮಿಷ ಭಾಷಣ ಮಾಡುವ ಮೂಲಕ ಟ್ರಂಪ್ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅತೀ ದೀರ್ಘ ಭಾಷಣ ಮಾಡಿದ ದಾಖಲೆ ಬರೆದಿದ್ದಾರೆ. 2000ರಲ್ಲಿ ಬಿಲ್ ಕ್ಲಿಂಟನ್ 1 ಗಂಟೆ 28 ನಿಮಿಷ ಮತ್ತು 49 ಸೆಕೆಂಡ್ ಭಾಷಣ ಮಾಡಿರುವುದು ಇದುವರೆಗಿನ ದಾಖಲೆಯಾಗಿತ್ತು.