ಅಮೆರಿಕ | ಜನರ ಗುಂಪಿಗೆ ಕಾರು ನುಗ್ಗಿಸಿ, ಗುಂಡಿನ ದಾಳಿ
10 ಮೃತ್ಯು, 30 ಮಂದಿಗೆ ಗಾಯ ; ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ದುರಂತ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್ : ಅಮೆರಿಕದ ನ್ಯೂ ಆರ್ಲಿಯಾನ್ಸ್ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನರ ಗುಂಪಿಗೆ ಕಾರೊಂದು ನುಗ್ಗಿದ್ದರಿಂದ 10 ಮಂದಿ ಸಾವನ್ನಪ್ಪಿದ್ದು ಇತರ 30 ಮಂದಿ ಗಾಯಗೊಂಡಿರುವುದಾಗಿ ನಗರದ ತುರ್ತು ಕಾರ್ಯಪಡೆಯ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಬುಧವಾರ ಬೆಳಿಗ್ಗೆ 3:15ರ (ಸ್ಥಳೀಯ ಕಾಲಮಾನ) ಸುಮಾರಿಗೆ ದುರಂತ ನಡೆದಿದೆ. ಅತೀ ವೇಗದಿಂದ ಧಾವಿಸಿ ಬಂದ ಕಾರೊಂದು ನ್ಯೂ ಆರ್ಲಿಯಾನ್ಸ್ನ ಇಬರ್ವಿಲ್ಲೆ ಪ್ರದೇಶದ ಬಾರ್ಬನ್ ಸ್ಟ್ರೀಟ್ನ ಅಡ್ಡರಸ್ತೆಯ ಬಳಿ ನೆರೆದಿದ್ದ ಜನರ ಗುಂಪಿನೊಳಗೆ ನುಗ್ಗಿದೆ. ಅಪಘಾತ ನಡೆಸಿದ ಬಳಿಕ ಕಾರಿನಿಂದ ಕೆಳಗಿಳಿದ ಚಾಲಕ ಜನರತ್ತ ಗುಂಡು ಹಾರಿಸಲು ಆರಂಭಿಸಿದ್ದಾನೆ. ಪೊಲೀಸರೂ ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೊಂದು ಭಯಾನಕ ಹಿಂಸಾಚಾರದ ಘಟನೆ ಎಂದು ಲೂಸಿಯಾನಾ ಗವರ್ನರ್ ಜೆಫ್ ಲ್ಯಾಂಡ್ರಿ ಖಂಡಿಸಿದ್ದಾರೆ.
ನ್ಯೂ ಆರ್ಲಿಯಾನ್ಸ್ನ ಜನಪ್ರಿಯ ಪ್ರವಾಸೀ ತಾಣವಾಗಿರುವ ಬಾರ್ಬನ್ ಸ್ಟ್ರೀಟ್ನಲ್ಲಿ ಪ್ರತೀ ವರ್ಷ ಹೊಸ ವರ್ಷದ ಸಂಭ್ರಮಾಚರಣೆಗೆ ಸಾವಿರಾರು ಜನರು ಸೇರುತ್ತಾರೆ. ಈ ಪ್ರದೇಶದ ಬಳಿ ಬೆಳಿಗ್ಗೆ ನಡೆಯಬೇಕಿದ್ದ ಸ್ಥಳೀಯ ಫುಟ್ಬಾಲ್ ಲೀಗ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅಪಘಾತ ಹಾಗೂ ಆ ಬಳಿಕ ನಡೆದ ಗುಂಡಿನ ಚಕಮಕಿಯಿಂದ ಜನರು ಆತಂಕಗೊಂಡು ದಿಕ್ಕಾಪಾಲಾಗಿ ಓಡಿದಾಗ ಕೆಲವರು ಬಿದ್ದು ಗಾಯಗೊಂಡರು. ಕನಿಷ್ಠ 30 ಮಂದಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.