ಅಮೆರಿಕ: ಮಕ್ಕಳ, ವಯಸ್ಕರ ಬೆತ್ತಲೆ ಫೋಟೋ ವಿಡಿಯೋ ತೆಗೆಯುತ್ತಿದ್ದ ಭಾರತೀಯ ವೈದ್ಯನ ಬಂಧನ
Photo Credit: X/@shahidullaskar_
ವಾಶಿಂಗ್ಟನ್: ಹಲವಾರು ವರ್ಷಗಳಿಂದ ಮಕ್ಕಳು ಮತ್ತು ಮಹಿಳೆಯರ ನೂರಾರು ನಗ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಆರೋಪದಲ್ಲಿ 40 ವರ್ಷದ ಭಾರತೀಯ ಮೂಲದ ವೈದ್ಯನನ್ನು ಬಂಧಿಸಲಾಗಿದೆ.
ಲೈಂಗಿಕ ಅಪರಾಧಗಳ ಆರೋಪದ ಮೇಲೆ 16 ಕೋಟಿ ರೂ. ಬಾಂಡ್ ಮೇಲೆ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆರೋಪಿಯನ್ನು ಉಮೈರ್ ಎಜಾಝ್ ಎಂದು ಗುರುತಿಸಲಾಗಿದೆ.
ಸ್ನಾನಗೃಹಗಳು, ಬಟ್ಟೆ ಬದಲಾಯಿಸುವ ಪ್ರದೇಶಗಳು, ಆಸ್ಪತ್ರೆ ಕೊಠಡಿಗಳು ಅಲ್ಲದೇ ಆರೋಪಿಯ ಸ್ವಂತ ಮನೆಯಲ್ಲೂ ವಿವಿಧೆಡೆ ಹಿಡನ್ ಕ್ಯಾಮೆರಾಗಳನ್ನು ಇರಿಸಿ 2 ವರ್ಷದ ಸಣ್ಣ ಮಕ್ಕಳ ಸಹಿತ ವಯಸ್ಕರ ನಗ್ನ ಚಿತ್ರ ಮತ್ತು ವಿಡಿಯೋಗಳನ್ನು ಆರೋಪಿ ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ. ಆಗಸ್ಟ್ 8 ರಂದು ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯ ಕೃತ್ಯದ ಬಗ್ಗೆ ಆತನ ಹೆಂಡತಿ ಪೊಲೀಸರಿಗೆ ಮಾಹಿತಿ ನೀಡಿದ ನಂತರವೇ, ಪ್ರಕರಣ ಬಯಲಾಗಿದೆ. ಬಂಧನಕ್ಕೂ ಮುನ್ನ ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನಲೆ ಇರಲಿಲ್ಲ.
ವೃತ್ತಿಯಲ್ಲಿ ವೈದ್ಯನಾಗಿರುವ ಉಮೈರ್ ಎಜಾಝ್ ನ ವಿಕೃತ ಕೃತ್ಯಕ್ಕೆ ಪೊಲೀಸರು ಬೆಚ್ಚಿದ್ದಾರೆ. ಆರೋಪಿಯನ್ನು ಆಗಸ್ಟ್ 8 ರಂದು ಆತನ ಮನೆಯಲ್ಲಿ ಬಂಧಿಸಿದಾಗಿನಿಂದ ಹಲವಾರು ಸರ್ಚ್ ವಾರಂಟ್ಗಳನ್ನು ನೀಡಲಾಗಿದೆ. ಕಂಪ್ಯೂಟರ್ಗಳು, ಫೋನ್ಗಳು ಮತ್ತು 15 ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಹಾರ್ಡ್ ಡ್ರೈವ್ನಲ್ಲಿ 13,000 ವೀಡಿಯೊಗಳಿವೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ಕ್ಲೌಡ್ ಸ್ಟೋರೇಜ್ಗೆ ವೀಡಿಯೊಗಳನ್ನು ಅಪ್ಲೋಡ್ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
2011 ರಲ್ಲಿ ಭಾರತದಿಂದ ಕೆಲಸದ ವೀಸಾದಲ್ಲಿ ಯುಎಸ್ಗೆ ತೆರಳಿದ ಏಜಾಝ್ ಈಗ ಅಮೆರಿಕದ ಪೌರತ್ವ ಪಡೆದಿದ್ದಾನೆ.
ಸಂತ್ರಸ್ತರನ್ನು ಗುರುತಿಸಲು ಕಷ್ಟವಾಗುವುದರಿಂದ, ಜನರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಇಮೇಲ್ ಅನ್ನು ಪೊಲೀಸರು ಒದಗಿಸಿದ್ದಾರೆ.