ಗಾಝಾದಲ್ಲಿ ತಕ್ಷಣ ಯುದ್ಧವಿರಾಮಕ್ಕೆ ಕರೆನೀಡುವ ವಿಶ್ವಸಂಸ್ಥೆ ನಿರ್ಣಯಕ್ಕೆ ಅಮೆರಿಕ ತಡೆ!
Photo: livemint.com
ವಿಶ್ವಸಂಸ್ಥೆ: ಗಾಝಾದಲ್ಲಿ ತಕ್ಷಣ ಮಾನವೀಯ ಕದನವಿರಾಮ ಜಾರಿಗೆ ಆಗ್ರಹಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಅಮೆರಿಕ ಮತ್ತೆ ವೀಟೊ ಪ್ರಯೋಗಿಸಿದ್ದು, ಅದರ ಬದಲು `ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿದರೆ ತಾತ್ಕಾಲಿಕ ಕದನ ವಿರಾಮ'ಕ್ಕೆ ಕರೆ ನೀಡುವ ಹೊಸ ನಿರ್ಣಯವನ್ನು ಪ್ರಸ್ತಾವಿಸಿದೆ.
ತಕ್ಷಣ ಮಾನವೀಯ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ಅಲ್ಜೀರಿಯಾ ಮಂಡಿಸಿದ್ದು ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 13 ಸದಸ್ಯ ದೇಶಗಳು ಬೆಂಬಲಿಸಿವೆ. ಬ್ರಿಟನ್ ಮತದಾನದಿಂದ ದೂರವುಳಿದರೆ ಅಮೆರಿಕ ವೀಟೊ ಪ್ರಯೋಗಿಸಿ ನಿರ್ಣಯವನ್ನು ತಡೆಹಿಡಿದಿದೆ. ಅಕ್ಟೋಬರ್ 7ರಂದು ಆರಂಭಗೊಂಡ ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಯಲ್ಲಿ ಮಂಡಿಸಿದ ನಿರ್ಣಯವನ್ನು ಅಮೆರಿಕ ಮೂರನೇ ಬಾರಿಗೆ ತಡೆಹಿಡಿದಂತಾಗಿದೆ.
ಈ ಕರಡು ನಿರ್ಣಯದ ಪರ ಮತ ಚಲಾಯಿಸುವುದು ಫೆಲೆಸ್ತೀನೀಯರ ಬದುಕುವ ಹಕ್ಕಿಗೆ ಬೆಂಬಲವಾಗಿದೆ. ಇದನ್ನು ವಿರೋಧಿಸಿ ಮತ ಚಲಾಯಿಸುವುದು ಫೆಲೆಸ್ತೀನೀಯರ ಮೇಲೆ ಹೇರಲಾದ ಕ್ರೂರ ಹಿಂಸಾಚಾರ ಮತ್ತು ಸಾಮೂಹಿಕ ಶಿಕ್ಷೆಯನ್ನು ಅನುಮೋದಿಸಿದಂತಾಗುತ್ತದೆ' ಎಂದು ನಿರ್ಣಯ ಮಂಡಿಸಿದ ವಿಶ್ವಸಂಸ್ಥೆಗೆ ಅಲ್ಜೀರಿಯಾ ರಾಯಭಾರಿ ಅಮಾರ್ ಬೆಂಡ್ಜಮ ಹೇಳಿದರು.
ಇದಕ್ಕೆ ಉತ್ತರಿಸಿದ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್ಫೀಲ್ಡ್ ` ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಒಪ್ಪಂದ ರೂಪಿಸದೆ ತಕ್ಷಣ ಮಾನವೀಯ ಕದನ ವಿರಾಮಕ್ಕೆ ಆಗ್ರಹಿಸುವುದು ಸ್ಥಿರ ಶಾಂತಿಯನ್ನು ತರುವುದಿಲ್ಲ. ಬದಲು ಹಮಾಸ್-ಇಸ್ರೇಲ್ ನಡುವಿನ ಯುದ್ಧವನ್ನು ವಿಸ್ತರಿಸಬಹುದು. ಆದ್ದರಿಂದ `ಪೂರ್ವ ಷರತ್ತುಗಳಿಲ್ಲದೆ ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾದಲ್ಲಿ ತಾತ್ಕಾಲಿಕ ಯುದ್ಧವಿರಾಮಕ್ಕೆ ಆಗ್ರಹಿಸುವ ಹೊಸ ನಿರ್ಣಯವನ್ನು ಅಮೆರಿಕ ಮಂಡಿಸಲಿದೆ ಎಂದರು