ಯೆಮನ್ ನಲ್ಲಿ 36 ಹೌದಿ ನೆಲೆಗಳ ಮೇಲೆ ಅಮೆರಿಕ, ಬ್ರಿಟನ್ ದಾಳಿ
Photo: twitter.com/BuonJose11019
ವಾಷಿಂಗ್ಟನ್: ಹಡಗುಗಳ ಮೇಲೆ ಪದೇ ಪದೇ ದಾಳಿ ನಡೆಸುವ ಮೂಲಕ ಜಾಗತಿಕ ವ್ಯಾಪಾರಕ್ಕೆ ಧಕ್ಕೆ ತರುತ್ತಿರುವ ಇರಾನ್ ಬೆಂಬಲಿತ ಹೌದಿ ಬಂಡುಕೋರರನ್ನು ಮಟ್ಟಹಾಕುವ ಪ್ರಯತ್ನವಾಗಿ ಅಮೆರಿಕ ಹಾಗೂ ಬ್ರಿಟನ್, ಶನಿವಾರ ಯೆಮನ್ ನಲ್ಲಿ 36 ಹೌದಿ ಶಿಬಿರಗಳನ್ನು ಗುರಿ ಮಾಡಿ ದಾಳಿ ನಡೆಸಿವೆ.
ಜೋರ್ಡಾನ್ ನಲ್ಲಿ ಜನವರಿ 28ರಂದು ಮೂವರು ಅಮೆರಿಕನ್ ಸೈನಿಕರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ, ಇರಾನ್ ಜೊತೆ ಸಂಪರ್ಕ ಹೊಂದಿರುವ ಸಂಘಟನೆಗಳನ್ನು ಗುರಿ ಮಾಡಿ ಇರಾಕ್ ಹಾಗೂ ಸಿರಿಯಾದಲ್ಲಿ ಅಮೆರಿಕ ಏಕಪಕ್ಷೀಯ ದಾಳಿ ನಡೆಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
"ಅಂತಾರಾಷ್ಟ್ರೀಯ ಹಾಗೂ ವಾಣಿಜ್ಯ ಶಿಪ್ಪಿಂಗ್ ನೌಕೆಗಳ ಮೇಲೆ ಹೌದಿಗಳು ಕೆಂಪು ಸಮುದ್ರ ದಾಟುವ ವೇಳೆ ನಡೆಸುವ ದಾಳಿಗೆ ಪ್ರತಿಯಾಗಿ, ಯೆಮನ್ ನ 13 ಕಡೆಗಳಲ್ಲಿ 36 ಹೌದಿ ನೆಲೆಗಳನ್ನು ಗುರಿಮಾಡಿ ದಾಳಿ ನಡೆಸಲಾಗಿದೆ" ಎಂದು ಅಮೆರಿಕ, ಬ್ರಿಟನ್ ಹಾಗೂ ಈ ದಾಳಿಗೆ ಬೆಂಬಲ ನೀಡಿರುವ ದೇಶಗಳು ಸ್ಪಷ್ಟಪಡಿಸಿವೆ.
ಜಾಗತಿಕ ವ್ಯಾಪಾರಕ್ಕೆ ಅಪಾಯ ಒಡ್ಡಿರುವ ಮತ್ತು ಅಮಾಯಕ ಸಮುದ್ರಯಾನಿಗಳ ಜೀವಕ್ಕೆ ಪ್ರಾಣಾಪಾಯ ಒಡ್ಡಿರುವ ಹೌದಿಗಳ ಬಲವನ್ನು ಕಡಿಮೆ ಮಾಡಲು ಈ ನಿಖರ ದಾಳಿ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಕ್ಷಿಪಣಿ ವ್ಯವಸ್ಥೆ, ಉಡಾವಣೆ ವ್ಯವಸ್ಥೆ ಮೇಲೆ, ವಾಯು ರಕ್ಷಣಾ ವ್ಯವಸ್ಥೆ ಮತ್ತು ರಾಡಾರ್ ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವ ವ್ಯವಸ್ಥೆ ಮೇಲೆ ದಾಳಿ ನಡೆಸಲಾಗಿದೆ.
ಇದಕ್ಕೂ ಮುನ್ನ ಶನಿವಾರ ಅಮೆರಿಕದ ಪಡೆಗಳು, ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಉಡಾಯಿಸಲು ಸಜ್ಜಾಗಿದ್ದ ಆರು ಹೌತಿ ಹಡಗು ನಿರೋಧಕ ಕ್ಷಿಪಣಿಗಳ ಮೇಲೆ ಶನಿವಾರ ಪ್ರತ್ಯೇಕ ದಾಳಿ ನಡೆಸಿದ್ದವು.