ಅಮೆರಿಕ | ಹೆಲೆನ್ ಚಂಡಮಾರುತ ; ಭೂಕುಸಿತಕ್ಕೆ 43 ಮಂದಿ ಬಲಿ
ಸಾಂದರ್ಭಿಕ ಚಿತ್ರ | PTI
ನ್ಯೂಯಾರ್ಕ್ : ಹೆಲೆನ್ ಚಂಡಮಾರುತದಿಂದಾಗಿ ಆಗ್ನೇಯ ಅಮೆರಿಕದ ಹಲವೆಡೆ ಶುಕ್ರವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ. ಭೂಕುಸಿತದಿಂದ ಹಲವು ಅಣೆಕಟ್ಟುಗಳು ಅಪಾಯದಲ್ಲಿದ್ದು 3.5 ದಶಲಕ್ಷಕ್ಕೂ ಅಧಿಕ ಮನೆಗಳು ಹಾಗೂ ವ್ಯಾಪಾರ ಕೇಂದ್ರಗಳಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿರುವುದಾಗಿ ವರದಿಯಾಗಿದೆ.
ಉತ್ತರದ ಜಾರ್ಜಿಯಾ ಮತ್ತು ಟೆನ್ನೆಸ್ಸೀ ಹಾಗೂ ಕರೋಲಿನಾ ರಾಜ್ಯಗಳತ್ತ ಸಾಗುವ ಮುನ್ನ ಫ್ಲೋರಿಡಾದ ಬಿಗ್ಬೆಂಡ್ ಪ್ರದೇಶಕ್ಕೆ ಅಪ್ಪಳಿಸಿದ ಚಂಡಮಾರುತದಿಂದಾಗಿ ವ್ಯಾಪಕ ನಾಶ-ನಷ್ಟ ಉಂಟಾಗಿದೆ. ಗಂಟೆಗೆ 140 ಕಿ.ಮೀ ವೇಗದ ಗಾಳಿಯೊಂದಿಗೆ ಬೀಸಿದ ಚಂಡಮಾರುತದಿಂದ ಬಂದರುಗಳಲ್ಲಿದ್ದ ದೋಣಿಗಳು ಮಗುಚಿಬಿದ್ದಿವೆ.ಹಲವು ಮರಗಳು ಉರುಳಿದ್ದು ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ.
ಟೆನ್ನೆಸ್ಸೀ ರಾಜ್ಯದ ಯುನಿಕೋಯ್ ನಗರದ ಆಸ್ಪತ್ರೆಗೆ ನೀರು ನುಗ್ಗಿದ್ದು ಆಸ್ಪತ್ರೆಯ ಛಾವಣಿಯಲ್ಲಿ ಆಶ್ರಯ ಪಡೆದಿದ್ದ 50ಕ್ಕೂ ಅಧಿಕ ಜನರನ್ನು ತುರ್ತು ಸೇವಾ ಪಡೆ ರಕ್ಷಿಸಿದೆ. ನೊಲಿಚುಕಿ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಆಸ್ಪತ್ರೆಯಿಂದ ರೋಗಿಗಳು ಹಾಗೂ ಇತರರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ. ಆದ್ದರಿಂದ ದೋಣಿ ಹಾಗೂ ಹೆಲಿಕಾಪ್ಟರ್ ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿರುವುದಾಗಿ ಸ್ಥಳೀಯಾಡಳಿತ ಮಾಹಿತಿ ನೀಡಿದೆ. ಬ್ಯೂನ್ಕೋಂಬ್ ನಗರದಲ್ಲಿ ಭೂಕುಸಿತದ ಹಿನ್ನೆಲೆಯಲ್ಲಿ ಎರಡು ಹೆದ್ದಾರಿಗಳನ್ನು ಮುಚ್ಚಲಾಗಿದೆ.