ಅಮೆರಿಕ | ಪ್ರತಿಭಟನಾಕಾರರ ಮೇಲೆ ರಬ್ಬರ್ ಬುಲೆಟ್ ಪ್ರಯೋಗ
PC : X
ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ನಡೆಯುತ್ತಿದ್ದ ಫೆಲೆಸ್ತೀನ್ ಪರ ಪ್ರತಿಭಟನೆಯನ್ನು ಚದುರಿಸಲು ಗುರುವಾರ ಪೊಲೀಸರು ರಬ್ಬರ್ ಬುಲೆಟ್ ಪ್ರಯೋಗಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕ್ರೂರವಾಗಿ ವರ್ತಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಖಂಡಿಸಿದ್ದಾರೆ. ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪ್ರತಿಭಟನಾಕಾರರು ಹಾಕಿದ್ದ ಟೆಂಟ್ಗಳನ್ನು ಬಲವಂತವಾಗಿ ತೆರವುಗೊಳಿಸಿದ ಪೊಲೀಸರು 20ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಕೆಲವರ ಕೈಗಳನ್ನು ಬೆನ್ನ ಹಿಂದಕ್ಕೆ ಕಟ್ಟಿಹಾಕಿ ನೆಲದ ಮೇಲೆ ಕೆಡವಲಾಗಿದೆ. ಪ್ರತಿರೋಧ ತೋರಿದ ಪ್ರತಿಭಟನಾಕಾರರ ಮೇಲೆ ರಬ್ಬರ್ ಬುಲೆಟ್ ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.
ತೆರವು ಕಾರ್ಯಾಚರಣೆಗೂ ಮುನ್ನ ಪ್ರತಿಭಟನಾ ನಿರತರಿಗೆ ಎಚ್ಚರಿಕೆ ನೀಡಿದ್ದ ವಿವಿ ಆಡಳಿತ ಮಂಡಳಿ ` ಪ್ರತಿಭಟನಾ ಕ್ಯಾಂಪ್ ಸ್ಥಾಪಿಸಲಾಗಿರುವ ಡಿಕ್ಸನ್ ಪ್ಲಾಝಾ ಪ್ರದೇಶದಿಂದ ತೆರಳುವಂತೆ ಸೂಚಿಸಿದ್ದರು. ಸೂಚನೆಯನ್ನು ಧಿಕ್ಕರಿಸುವುದನ್ನು ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದುʼ ಎಂದು ಆಡಳಿತ ಮಂಡಳಿಯ ಹೇಳಿಕೆ ತಿಳಿಸಿದೆ.