ಕೆಂಪು ಸಮುದ್ರದ ಮೇಲೆ ಹೌದಿಗಳ ಡ್ರೋನ್ ಹೊಡೆದುರುಳಿಸಿದ ಅಮೆರಿಕ
Photo: news18.com
ವಾಷಿಂಗ್ಟನ್: ಹೌದಿ ಬಂಡುಗೋರರು ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳನ್ನು ಗುರಿಯಾಗಿಸಿ ಹಾರಿಸಿದ ಹತ್ತಕ್ಕೂ ಅಧಿಕ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಅಮೆರಿಕದ ಸಮರ ನೌಕೆ ಹೊಡೆದುರುಳಿಸಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಹೇಳಿದೆ.
10 ಗಂಟೆಯ ಅವಧಿಯಲ್ಲಿ 12 ಡ್ರೋನ್ಗಳು, ಮೂರು ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ 2 ಭೂ ದಾಳಿ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಈ ಸಂದರ್ಭ ಸಮೀಪದಲ್ಲಿ ಸಂಚರಿಸುತ್ತಿದ್ದ ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೆಂಟಗಾನ್ ಹೇಳಿದೆ.
ಈ ಮಧ್ಯೆ, ಮಂಗಳವಾರ ಕೆಂಪು ಸಮುದ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ ಮತ್ತು ದಕ್ಷಿಣ ಇಸ್ರೇಲ್ನ ಸೇನಾ ನೆಲೆಗಳನ್ನು ಗುರಿಯಾಗಿಸಿ ಹಲವು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಹೌದಿ ವಕ್ತಾರ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಯೆಮನ್ನ ಪಶ್ಚಿಮ ಕರಾವಳಿಯ ಹೊದೈದಾ ಬಂದರಿನ ಬಳಿ ಭಾರೀ ಸ್ಫೋಟದ ಸದ್ದು ಕೇಳಿಸಿದೆ. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಬ್ರಿಟನ್ ಸಾಗರ ವ್ಯಾಪಾರ ಕಾರ್ಯಾಚರಣೆ(ಯುಕೆಎಂಟಿಒ) ಮಾಹಿತಿ ನೀಡಿತ್ತು.