ಅಮೆರಿಕ ರಾಜಕೀಯದ ಹುಳುಕನ್ನು ತೋರಿಸಿದೆ: ಪುಟಿನ್
ಟ್ರಂಪ್ ವಿರುದ್ಧದ ಪ್ರಕರಣ
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ Photo- PTI
ಮಾಸ್ಕೊ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳು ರಾಜಕೀಯ ಕಾರಣಗಳಿಗಾಗಿ ರಾಜಕೀಯ ಪ್ರತಿಸ್ಪರ್ಧಿಗೆ ಕಿರುಕುಳದ ಒಂದು ರೂಪವಾಗಿದೆ. ಇದು ಅಮೆರಿಕ ರಾಜಕೀಯದ ಹುಳುಕನ್ನು ಮತ್ತು ಅಮೆರಿಕದಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಎತ್ತಿತೋರಿಸಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಹೇಳಿದ್ದಾರೆ.
ರಶ್ಯದ ವ್ಲಾದಿವೊಸ್ಟೊಕ್ನಲ್ಲಿ ನಡೆದ `ಈಸ್ಟರ್ನ್ ಇಕನಾಮಿಕ್ ಫೋರಂ'ನ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್ ` ಟ್ರಂಪ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಅಲ್ಲಿ ಈಗ ನಡೆಯುತ್ತಿರುವುದೆಲ್ಲಾ ನಮ್ಮ ಅಭಿಪ್ರಾಯದಲ್ಲಿ ಒಳ್ಳೆಯ ಘಟನೆಗಳು. ಯಾಕೆಂದರೆ ಇದು ಅಮೆರಿಕದ ರಾಜಕೀಯ ಹುಳುಕನ್ನು ಜಗತ್ತಿನೆದುರು ತೆರೆದಿಟ್ಟಿದೆ. ಇತರರಿಗೆ ಪ್ರಜಾಪ್ರಭುತ್ವದ ಪಾಠ ಕಲಿಸುವ ನಾಟಕ ಮಾಡಬಾರದು ಎಂಬ ಸೂಚನೆಯನ್ನು ಅಮೆರಿಕಕ್ಕೆ ನೀಡುತ್ತದೆ' ಎಂದರು.
ತಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಉಕ್ರೇನ್ ಬಿಕ್ಕಟ್ಟಿಗೆ ಕೆಲ ದಿನಗಳಲ್ಲೇ ಪರಿಹಾರ ಹುಡುಕುವುದಾಗಿ ಟ್ರಂಪ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಪುಟಿನ್ `ಇದು ಒಳ್ಳೆಯ ವಿಷಯ. ಎಲ್ಲರಿಗೂ ಸಂತೋಷ ಕೊಡುವ ಹೇಳಿಕೆಯಾಗಿದೆ.
ಆದರೆ ಅಮೆರಿಕದ ಅಧ್ಯಕ್ಷ ಯಾರೇ ಆದರೂ, ರಶ್ಯ-ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ಸಂಭಾವ್ಯತೆ ಕಡಿಮೆಯಾಗಿದೆ. ಬೈಡನ್ ಆಡಳಿತ ರಶ್ಯ ವಿರುದ್ಧದ ಭಾವನೆಯನ್ನು ಪ್ರಚೋದಿಸುತ್ತಿರುವುದು ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ತೀವ್ರ ತೊಡಕಾಗಲಿದೆ' ಎಂದರು.