ಗಾಝಾದಲ್ಲಿ ತಾತ್ಕಾಲಿಕ ಕದನವಿರಾಮ ಜಾರಿಗೆ ಅಮೆರಿಕ ಬೆಂಬಲ!
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಮೆರಿಕದ ಅಚ್ಚರಿಯ ನಡೆ ► ರಫಾದಲ್ಲಿ ಇಸ್ರೇಲ್ ಕಾರ್ಯಾಚರಣೆಗೆ ವಿರೋಧ
Photo: scroll.in
ವಿಶ್ವಸಂಸ್ಥೆ: ಇದುವರೆಗೆ ಗಾಝಾ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಂಡನೆಯಾಗುವ ಯಾವುದೇ ನಿರ್ಣಯದಲ್ಲಿ ಕದನ ವಿರಾಮ ಎಂಬ ಪದ ಸೇರ್ಪಡೆಯನ್ನು ಬಲವಾಗಿ ವಿರೋಧಿಸಿ ವೀಟೊ ಪ್ರಯೋಗಿಸುತ್ತಿದ್ದ ಅಮೆರಿಕ ಇದೇ ಮೊದಲ ಬಾರಿಗೆ ಗಾಝಾದಲ್ಲಿ ತಾತ್ಕಾಲಿಕ ಕದನ ವಿರಾಮ ಜಾರಿಯ ಪರ ಒಲವು ತೋರಿಸಿದೆ.
ಇಸ್ರೇಲ್-ಹಮಾಸ್ ನಡುವೆ ತಾತ್ಕಾಲಿಕ ಕದನ ವಿರಾಮ ಜಾರಿಯನ್ನು ಆಗ್ರಹಿಸುವ ಪರ್ಯಾಯ ಕರಡು ನಿರ್ಣಯವನ್ನು ಅಮೆರಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮುಂದೆ ಇರಿಸಿದೆ.
ಅಲ್ಲದೆ ರಫಾ ನಗರದಲ್ಲಿ ಇಸ್ರೇಲ್ ಪದಾತಿ ದಳದ ಕಾರ್ಯಾಚರಣೆಯನ್ನೂ ನಿರ್ಣಯದಲ್ಲಿ ವಿರೋಧಿಸಲಾಗಿದೆ. ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆ ಕ್ರಮಗಳಲ್ಲಿ `ಕದನ ವಿರಾಮ' ಎಂಬ ಪದವನ್ನು ಬಳಸಲು ಇದುವರೆಗೆ ಹಿಂಜರಿಯುತ್ತಿದ್ದ ಅಮೆರಿಕ ಇದೀಗ ಯು-ಟರ್ನ್ ಹೊಡೆದಿದೆ ಎಂದು `ರಾಯ್ಟರ್ಸ್' ವರದಿ ಮಾಡಿದೆ.
ಪ್ರಸ್ತಾವಿತ ನಿರ್ಣಯವು ಗಾಝಾದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಭದ್ರತಾ ಮಂಡಳಿಯ ಬೆಂಬಲವನ್ನು ಒತ್ತಿಹೇಳಿದೆ. ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಕುರಿತ ಅನಿಶ್ಚಿತತೆಯನ್ನು ಅಂತ್ಯಗೊಳಿಸಲು ಹಾಗೂ ಮಾನವೀಯ ನೆರವಿನ ಅನಿಯಂತ್ರಿತ ಪೂರೈಕೆಗೆ ಅವಕಾಶ ನೀಡುತ್ತದೆ. `ಭದ್ರತಾ ಮಂಡಳಿಯು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಸೂತ್ರದ ಆಧಾರದ ಮೇಲೆ ಸಾಧ್ಯವಾದಷ್ಟು ಬೇಗ ಗಾಝಾದಲ್ಲಿ ತಾತ್ಕಾಲಿಕ ಕದನವಿರಾಮಕ್ಕೆ ತನ್ನ ಬೆಂಬಲವನ್ನು ಒತ್ತಿಹೇಳುತ್ತದೆ ಮತ್ತು ಮಾನವೀಯ ನೆರವು ಒದಗಿಸುವಲ್ಲಿ ಎಲ್ಲಾ ಅಡೆತಡೆಗಳನ್ನೂ ತೆಗೆದು ಹಾಕಲು ಕರೆ ನೀಡುತ್ತದೆ' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಈ ನಿರ್ಣಯದ ಪರ ತಕ್ಷಣ ಮತದಾನ ನಡೆಯಬೇಕೆಂದು ಅಮೆರಿಕ ಇಚ್ಛಿಸುತ್ತಿಲ್ಲ. ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೂ ಮುನ್ನ `ಗಾಝಾದಲ್ಲಿ ತಕ್ಷಣ ಮಾನವೀಯ ಕದನವಿರಾಮ ಜಾರಿಗೊಳ್ಳಬೇಕು' ಎಂದು ಆಗ್ರಹಿಸಿ ಅಲ್ಜೀರಿಯಾ ಮಂಡಿಸಿದ್ದ ನಿರ್ಣಯವನ್ನು ವೀಟೊ ಪ್ರಯೋಗಿಸಿ ಅಮೆರಿಕ ತಡೆದಿತ್ತು. ಈ ನಿರ್ಣಯ ಜಾರಿಯಾದರೆ ಅಮೆರಿಕ, ಈಜಿಪ್ಟ್, ಖತರ್ ಮತ್ತು ಇಸ್ರೇಲ್ ಒಳಗೊಂಡು ನಡೆಯುತ್ತಿರುವ ಮಾತುಕತೆಗೆ ತೊಡಕಾಗಲಿದೆ ಎಂದು ಅಮೆರಿಕದ ನಿಯೋಗ ಪ್ರತಿಪಾದಿಸಿದೆ.
ಇಸ್ರೇಲ್ ಗೆ ಎಚ್ಚರಿಕೆಯ ಸಂಕೇತ
ಇದುವರೆಗೆ ವಿಶ್ವಸಂಸ್ಥೆಯ ಕ್ರಮದಿಂದ ಇಸ್ರೇಲ್ಗೆ ರಕ್ಷಣಾ ಕವಚ ಒದಗಿಸುತ್ತಿದ್ದ ಅಮೆರಿಕದ ನಡೆಯು ಈ ಹಿಂದಿನ ನಿಲುವಿನಿಂದ ದೂರ ಸರಿಯುತ್ತಿರುವುದರ ಸಂಕೇತವಾಗಿದೆ. ಈ ನಿರ್ಣಯ ಮಂಡನೆ ಇಸ್ರೇಲ್ಗೆ ಎಚ್ಚರಿಕೆಯ ಸಂದೇಶವಾಗಿದೆ. ಅಮೆರಿಕದ ರಾಜತಾಂತ್ರಿಕ ರಕ್ಷಣೆಯನ್ನು ಅನಿರ್ದಿಷ್ಟಾವಧಿಗೆ ಅವಲಂಬಿಸುವಂತಿಲ್ಲ ಎಂಬ ಕಠಿಣ ಸಂದೇಶ ಇದಾಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿ ರಿಚರ್ಡ್ ಗೊವಾನ್ ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಗಳಲ್ಲಿ ರಫಾದಲ್ಲಿ ಪದಾತಿ ದಳದ ಆಕ್ರಮಣವು ಮುಂದುವರಿದರೆ ಅಲ್ಲಿ ಆಶ್ರಯ ಪಡೆದಿರುವ ಗಾಝಾದ ಜನರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ನಿರ್ಣಯ ಒತ್ತಿಹೇಳಿದೆ.