ಅಮೆರಿಕ | 5 ಮಂದಿ ಸಜೀವ ದಹನ ಪ್ರಕರಣ ಉದ್ದೇಶಪೂರ್ವಕ ಕೃತ್ಯ; ವರದಿ
ವಿಚ್ಛೇದನದ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ತಾಯಿ, ಮಕ್ಕಳೊಂದಿಗೆ ಆತ್ಮಹತ್ಯೆ!
ನ್ಯೂಯಾರ್ಕ್: ಅಮೆರಿಕದ ಮಿಸ್ಸೋರಿಯಲ್ಲಿ ಫೆಬ್ರವರಿ 20ರಂದು ಮನೆಗೆ ಬೆಂಕಿ ಬಿದ್ದು 5 ಮಂದಿ ಜೀವಂತ ದಹನಗೊಂಡ ಪ್ರಕರಣದಲ್ಲಿ, ಮೃತ ಮಹಿಳೆಯೇ ಮನೆಗೆ ಬೆಂಕಿ ಹಚ್ಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಶಿಕ್ಷಕಿಯಾಗಿರುವ ಬೆರ್ನಾಡಿನ್ ಪ್ರುಸ್ನರ್ (39 ವರ್ಷ) ಉದ್ದೇಶಪೂರ್ವಕವಾಗಿ ಹಾಸಿಗೆಗೆ ಅಗ್ನಿಸ್ಪರ್ಷ ಮಾಡಿದ್ದು ಬೆಂಕಿ ತಕ್ಷಣ ಸಂಪೂರ್ಣ ಮನೆಗೆ ವ್ಯಾಪಿಸಿದೆ. 9 ವರ್ಷದ ಅವಳಿ ಮಕ್ಕಳಾದ ಎಲೀ ಮತ್ತು ಐವಿ, ಜಾಕ್ಸನ್(6 ವರ್ಷ) ಮತ್ತು ಮಿಲೀ (2 ವರ್ಷ) ಬೆಂಕಿಯಲ್ಲಿ ದಹನಗೊಂಡಿದ್ದರು. ಪ್ರುಸ್ನರ್ ಕೂಡಾ ಮೃತಪಟ್ಟಿದ್ದಳು. ಆರಂಭದಲ್ಲಿ ಇದು ಅಕಸ್ಮಾತ್ ಆದ ದುರಂತ ಎಂದು ಪೊಲೀಸರು ಶಂಕಿಸಿದ್ದರು. ಆದರೆ ದುರ್ಘಟನೆ ನಡೆಯುವ ಒಂದು ದಿನ ಮೊದಲು ಪ್ರುಸ್ನರ್ ಸಾಮಾಜಿಕ ಮಾಧ್ಯಮದಲ್ಲಿ `ನಾವು ಪ್ರಪಂಚದ ವಿರುದ್ಧ. ನಿಮ್ಮ ತಾಯಿಯಾಗಿರುವುದು ನನ್ನ ಸೌಭಾಗ್ಯ' ಎಂದು ಮಕ್ಕಳನ್ನು ಉದ್ದೇಶಿಸಿ ಪೋಸ್ಟ್ ಮಾಡಿದ್ದರು.
ಈಕೆ 2017ರಲ್ಲಿ ಪತಿ ಡೇವಿಡ್ ಪ್ರುಸ್ನರರ್ ನಿಂದ ವಿಚ್ಛೇದನ ಪಡೆದಿದ್ದರು. ಮಕ್ಕಳ ಪೋಷಣೆಯನ್ನು ಜಂಟಿಯಾಗಿ ನಿರ್ವಹಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಕಳೆದ ವರ್ಷ ಬೇರೆಡೆಗೆ ಸ್ಥಳಾಂತರಗೊಳ್ಳುವ ಬೆರ್ನಾಡಿನ್ ನಿರ್ಧಾರವನ್ನು ಡೇವಿಡ್ ವಿರೋಧಿಸಿ ಮಕ್ಕಳ ಪೋಷಣೆಯ ಖರ್ಚು ನೀಡಲು ನಿರಾಕರಿಸಿದ್ದ. ಈ ಬಗ್ಗೆ ಬೆರ್ನಾಡಿನ್ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಪ್ರಕರಣದ ವಿಚಾರಣೆ ಮುಂದುವರಿದಿದೆ. ಈ ಮಧ್ಯೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಅವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಇದುವರೆಗಿನ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.