ಅಮೆರಿಕ: ಸುಂಟರ ಗಾಳಿಯ ಅಬ್ಬರ; 3 ಮಂದಿ ಮೃತ್ಯು
ವಾಷಿಂಗ್ಟನ್: ಅಮೆರಿಕದ ಇಂಡಿಯಾನಾ ಮತ್ತು ಓಹಿಯೊ ರಾಜ್ಯದ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಅಪ್ಪಳಿಸಿದ ಚಂಡಮಾರುತದಿಂದ ಕನಿಷ್ಠ 3 ಮಂದಿ ಮೃತಪಟ್ಟಿದ್ದು 38ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಓಹಿಯೋದ ಲೊಗಾನ್ ಕೌಂಟಿಯಲ್ಲಿ ಮೂರು ಸಾವಿನ ಪ್ರಕರಣ ವರದಿಯಾಗಿದೆ. ವಿದ್ಯುತ್ ಪೂರೈಕೆ ಜಾಲಕ್ಕೆ ಹಾನಿಯಾಗಿರುವುದರಿಂದ ಹಲವೆಡೆ ವಿದ್ಯುತ್ ವ್ಯವಸ್ಥೆ ಮೊಟಕುಗೊಂಡಿದ್ದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ತೊಡಕಾಗಿದೆ. ಹಲವು ಮನೆಗಳು ಕುಸಿದಿರುವ ಮಾಹಿತಿಯಿದೆ. ಲೇಕ್‍ವ್ಯೂ ಪ್ರದೇಶದಲ್ಲಿ ಸಂಚಾರಿ ಮನೆಗಳು ತೀವ್ರ ಹಾನಿಗೊಂಡಿದ್ದು ಭಾರೀ ಗಾತ್ರದ ಮರಗಳು ರಸ್ತೆಗೆ ಉರುಳಿಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಓಹಿಯೋದ ಮುಖ್ಯಾಧಿಕಾರಿ ರ್ಯಾಂಡಲ್ ಡಾಡ್ಸ್ ಹೇಳಿದ್ದಾರೆ.
ಪೂರ್ವ ಇಂಡಿಯಾನಾದಲ್ಲಿ 38 ಮಂದಿ ಗಾಯಗೊಂಡಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. 22 ಮನೆಗಳು ನಾಶವಾಗಿದ್ದು 100ಕ್ಕೂ ಅಧಿಕ ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
Next Story