ಕೆಂಪು ಸಮುದ್ರವನ್ನು ರಕ್ತ ಸಮುದ್ರವಾಗಿಸುತ್ತಿರುವ ಅಮೆರಿಕ: ಟರ್ಕಿ ಟೀಕೆ
ರಿಸೆಪ್ ತಯ್ಯಿಪ್ ಎರ್ಡೋಗನ್ | Photo: PTI
ಅಂಕಾರ: ಯೆಮನ್ನಲ್ಲಿ ಹೌದಿಗಳ ನೆಲೆಯ ಮೇಲಿನ ದಾಳಿ ಸಂದರ್ಭ ಅಮೆರಿಕ ಮತ್ತು ಬ್ರಿಟನ್ ಅಸಮಾನ ಬಲ ಪ್ರಯೋಗಿಸಿದ್ದು ಎರಡೂ ದೇಶಗಳು ಕೆಂಪು ಸಮುದ್ರವನ್ನು ರಕ್ತದ ಸಮುದ್ರವನ್ನಾಗಿಸಲು ಪ್ರಯತ್ನಿಸುತ್ತಿವೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಆರೋಪಿಸಿದ್ದಾರೆ.
ನೇಟೊ ಸದಸ್ಯನಾಗಿರುವ ಟರ್ಕಿ ಗಾಝಾ ಯುದ್ಧದ ವಿಷಯದಲ್ಲಿ ಇಸ್ರೇಲ್ ವಿರುದ್ಧ ಟೀಕಾಪ್ರಹಾರ ಮಾಡುತ್ತಿದೆ ಮತ್ತು ಇಸ್ರೇಲ್ಗೆ ಬೆಂಬಲ ಸೂಚಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಕಿಡಿ ಕಾರುತ್ತಿದೆ. `ಹೌದಿಗಳ ದಾಳಿಗೆ ಪ್ರತೀಕಾರವಾಗಿ ಅಮೆರಿಕ, ಬ್ರಿಟನ್ ನಡೆಸಿದ ಪ್ರತಿದಾಳಿ ಪ್ರಮಾಣಾನುಗತ ಆಗಿರಲಿಲ್ಲ ಮತ್ತು ಅಸಮಾನ ಬಲಪ್ರದರ್ಶನ ನಡೆದಿದೆ. ತನ್ನೆಲ್ಲಾ ಬಲ ಪ್ರಯೋಗಿಸಿ ಅಮೆರಿಕ ಮತ್ತು ಬ್ರಿಟನ್ಗೆ ಸೂಕ್ತ ಪ್ರತ್ಯುತ್ತರ ನೀಡುವುದಾಗಿ ಹೌದಿಗಳು ಎಚ್ಚರಿಸಿದ್ದಾರೆ. ಇದನ್ನು ಗಮನಿಸಿದರೆ ಕೆಂಪು ಸಮುದ್ರವು ರಕ್ತದ ಸಮುದ್ರವಾಗಿ ಮಾರ್ಪಾಡಾಗಬಹುದು' ಎಂದು ಎರ್ಡೋಗನ್ ಹೇಳಿದ್ದಾರೆ.
ಯೆಮನ್ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರಕಾರವನ್ನು ಟರ್ಕಿ ಬೆಂಬಲಿಸುತ್ತಿದೆ ಮತ್ತು ಯೆಮನ್ ಸರಕಾರ ಹಾಗೂ ಯೆಮನ್ನ ಹಲವು ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿರುವ ಇರಾನ್ ಬೆಂಬಲಿತ ಹೌದಿಗಳ ನಡುವೆ ಸಂಧಾನಕ್ಕೆ ವಿಶ್ವಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಯನ್ನು ಬೆಂಬಲಿಸಿದೆ.