ರಶ್ಯದಿಂದ ಅಮೆರಿಕದ ಪತ್ರಕರ್ತ, ಮಾಜಿ ಯೋಧನ ಬಿಡುಗಡೆ
PC : aljazeera | ಇವಾನ್ ಗೆರ್ಶ್ಕೊವಿಚ್
ಅಂಕಾರ (ಟರ್ಕಿ) : ಅಮೆರಿಕ ಜೊತೆಗಿನ ಪ್ರಮುಖ ಖೈದಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ರಶ್ಯವು ಗುರುವಾರ ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿಗಾರ ಇವಾನ್ ಗೆರ್ಶ್ಕೊವಿಚ್ ಹಾಗೂ ದೀರ್ಘಕಾಲದಿಂ ತನ್ನ ಬಂಧನದಲ್ಲಿರುವ ಅಮೆರಿಕದ ಮಾಜಿ ಮೆರೈನ್ ಸೇನಾಪಡೆಯ ಯೋಧ ಪೌಲ್ ವ್ಹೆಲಾನ್ ಅವರನ್ನು ಬಿಡುಗಡೆಗೊಳಿಸಿದೆ. ಬೇಹುಗಾರಿಕೆಯ ಆರೋಪದಲ್ಲಿ ಇವರಿಬ್ಬರನ್ನೂ ರಶ್ಯವು ಬಂಧಿಸಿ ಜೈಲಿನಲ್ಲಿರಿಸಿತ್ತು. ಟರ್ಕಿ ರಾಜಧಾನಿ ಅಂಕಾರದಲ್ಲಿ ನಡೆದ ಕೈದಿಗಳ ವಿನಿಯಮ ಕಾರ್ಯಕ್ರಮದಲ್ಲಿ ಇವರಿಬ್ಬರನ್ನೂ ಬಿಡುಗಡೆಗೊಳಿಸಲಾಗಿದೆ.
ವಿವಿಧ ದೇಶಗಳನ್ನು ಒಳಗೊಂಡ ಕೈದಿಗಳ ವಿನಿಮಯ ಕಾರ್ಯಕ್ರಮದಲ್ಲಿ ಒಟ್ಟು 26 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ವಾಲ್ಸ್ಟ್ರೀಟ್ ಜರ್ನಲ್ ವರದಿಗಾರ 32 ವರ್ಷದ ಗೆರ್ಶ್ಕೊವಿಚ್ ಅವರನ್ನು ಗೂಢಚರ್ಯೆ ನಡೆಸಿದ ಆರೋಪದಲ್ಲಿ ಮಾರ್ಚ್ 2023ರಂದು ರಶ್ಯವು ಬಂಧಿಸಿತ್ತು. ವಿಚಾರಣೆ ನಡೆಸಿದ ಕ್ಷಿಪ್ರ ಗತಿಯ ನ್ಯಾಯಾಲಯವು ಅವರನ್ನು ದೋಷಿಯೆಂದು ಪರಿಗಣಿಸಿತ್ತು. ಆದರೆ ಅಮೆರಿಕವು ಗೆರ್ಶ್ಕೊವಿಚ್ ಅವರ ಮೇಲಿನ ಆರೋಪವನ್ನು ತಳ್ಳಿಹಾಕಿದೆ.
ಚೆಚೆನ್ಯದ ಬಂಡುಕೋರ ಗುಂಪಿನ ಮಾಜಿ ಕಮಾಂಡರ್ನನ್ನು ಹತ್ಯೆಗೈದ ಆರೋಪದಲ್ಲಿ ಜರ್ಮನಿಯಿಂದ ಬಂಧಿಸಲ್ಪಟ್ಟಿರುವ ರಶ್ಯನ್ ಪ್ರಜೆ ವಾದಿಮ್ ಕ್ರಾಸಿಕೊವ್ನ ಬಿಡುಗಡೆಗೆ ವಿನಿಮಯವಾಗಿ ಇವರಿಬ್ಬರನ್ನೂ ಬಂಧಮುಕ್ತಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.