ಅಮೆರಿಕ ಸರಕುಗಳ ಮೇಲೆ ಶೇ. 25ರಷ್ಟು ಸುಂಕ: ಟ್ರಂಪ್ ತೆರಿಗೆ ಎಚ್ಚರಿಕೆಗೆ ಕೆನಡಾ ತಿರುಗೇಟು

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Photo: PTI)
ಒಟ್ಟಾವ: ತನ್ನ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದ ಅಮೆರಿಕಕ್ಕೆ ಕೆನಡಾ ತಿರುಗೇಟು ನೀಡಿದ್ದು, ಅಮೆರಿಕದ ಆಯ್ದ ಸರಕುಗಳ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸುತ್ತೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಘೋಷಿಸಿದ್ದಾರೆ.
“ಅಮೆರಿಕದ ವ್ಯಾಪಾರ ಶೈಲಿಗೆ ನಾವು ತಿರುಗೇಟು ನೀಡುತ್ತಿದ್ದೇವೆ. 106 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸುತ್ತಿದ್ದೇವೆ” ಎಂದು ಟ್ರುಡೊ ಪ್ರಕಟಿಸಿದ್ದಾರೆ. ಇದರಿಂದ ಅಮೆರಿಕ-ಕೆನಡಾ ನಡುವೆ ದೀರ್ಘಕಾಲೀನ ವ್ಯಾಪಾರ ಸಂಬಂಧಕ್ಕೆ ಹುಳಿ ಹಿಂಡಿದಂತಾಗಿದೆ.
ಈ ಪ್ರಕಟಣೆಯನ್ವಯ, ಮೊದಲಿಗೆ 30 ಬಿಲಿಯನ್ ಕೆನಡಾ ಡಾಲರ್ ಮೌಲ್ಯದ ಅಮೆರಿಕ ಉತ್ಪನ್ನಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಈ ಕ್ರಮವು ಮಂಗಳವಾರದಿಂದಲೇ ಜಾರಿ ಬರಲಿದೆ. ಮೂರು ವಾರಗಳ ಬಳಿಕ 125 ಬಿಲಿಯನ್ ಕೆನಡಾ ಡಾಲರ್ ಮೌಲ್ಯದ ಸರಕುಗಳಿಗೆ ಈ ಹೆಚ್ಚುವರಿ ಸುಂಕ ಅನ್ವಯವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, “ನಾವು ಈ ವಿಷಯವನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ. ನಾವು ಕೆನಡಾಗಾಗಿ, ಕೆನಡಾದ ಜನರಿಗಾಗಿ ಹಾಗೂ ಕೆನಡಾದ ಉದ್ಯೋಗದ ಪರವಾಗಿ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.
ಅಮೆರಿಕದ ಬಿಯರ್, ವೈನ್, ಹಣ್ಣು, ತರಕಾರಿ, ಪ್ಲಾಸ್ಟಿಕ್ ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಈ ಹೊಸ ಸುಂಕ ಅನ್ವಯವಾಗಲಿದೆ ಎಂದು ಟ್ರುಡೊ ತಿಳಿಸಿದ್ದಾರೆ.
ಈ ವ್ಯಾಪಾರ ಸಮರದ ಪರಿಣಾಮ ಅಮೆರಿಕದ ಮೇಲೆ ಉಂಟಾಗಲಿದೆ. ಅಲ್ಲಿ ಉದ್ಯೋಗ ನಷ್ಟ, ಆಹಾರ ಹಣದುಬ್ಬರ, ಆಟೊಮೊಬೈಲ್, ಪೊಟಾಷ್, ಯುರೇನಿಯಂ, ಉಕ್ಕು ಸೇರಿದಂತೆ ಹಲವು ಉದ್ಯಮಗಳ ಮೇಲೆ ಪರಿಣಾಮವಾಗಲಿದೆ ಎಂದು ಅವರು ಹೇಳಿದ್ದಾರೆ.
ಟ್ರೊಡೊರ ಈ ಘೋಷಣೆಗೂ ಮುನ್ನ, ಕೆನಡಾ, ಮೆಕ್ಸಿಕೊ ಹಾಗೂ ಚೀನಾದ ಉತ್ಪನ್ನಗಳಿಗೆ ತೆರಿಗೆ ವಿಧಿಸುವ ಪ್ರಸ್ತಾವಕ್ಕೆ ಟ್ರಂಪ್ ಸಹಿ ಹಾಕಿದ್ದರು.
ಕೆನಡಾ ಹಾಗೂ ಮೆಕ್ಸಿಕೊದ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ. 25ರಷ್ಟು ತೆರಿಗೆ ವಿಧಿಸಲಾಗಿದೆ. ಕೆನಡಾದ ಇಂಧನ ಹಾಗೂ ತೈಲ ಉತ್ಪನ್ನಗಳ ಮೇಲೆ ಶೇ. 10ರಷ್ಟು ಸುಂಕ ಜಾರಿಗೊಳಿಸಲಾಗಿದೆ. ಚೀನಾದ ಉತ್ಪನ್ನಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದಾರೆ.