ಅಮೆರಿಕದಲ್ಲಿ ತೀವ್ರಗೊಂಡ ಇಸ್ರೇಲ್ ವಿರೋಧಿ ಪ್ರತಿಭಟನೆ
PC : X/@TRTWorldNow
ನ್ಯೂಯಾರ್ಕ್ : ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೊಳ್ಳಬೇಕೆಂದು ಆಗ್ರಹಿಸಿ ಅಮೆರಿಕದ ವಿವಿಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದ್ದು ನ್ಯೂಯಾರ್ಕ್ ಸಿಟಿ ಸ್ಕೂಲ್ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಶಾಲೆಯ ಕ್ಯಾಂಪಸ್ನಲ್ಲಿ ಸ್ಥಾಪಿಸಿರುವ ಟೆಂಟ್ ಅನ್ನು ತೆರವುಗೊಳಿಸಲು ಮುಂದಾದ ಭದ್ರತಾ ಸಿಬ್ಬಂದಿಯನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪಕ್ಕಕ್ಕೆ ದೂಡಿ ಹಾಕಿ, ಸಿಬ್ಬಂದಿಯನ್ನು ಸುತ್ತುವರಿದು ಫೆಲೆಸ್ತೀನ್ ಪರ ಘೋಷಣೆ ಕೂಗುವುದು ಮತ್ತು ಭದ್ರತಾ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಂಡು ಓಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಗೊಳ್ಳಬೇಕೆಂದು ಆಗ್ರಹಿಸಿ ಕೊಲಂಬಿಯಾ ವಿವಿಯಲ್ಲಿ ಕಳೆದ ವಾರ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆ ಇದೀಗ ಅಮೆರಿಕದಾದ್ಯಂತದ ವಿಶ್ವವಿದ್ಯಾಲಯಗಳನ್ನು ವ್ಯಾಪಿಸಿದ್ದು ಹಲವು ವಿವಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವಿವಿ ಆಡಳಿತ ಮಂಡಳಿ ಘೋಷಿಸಿದೆ.