ಟ್ರಂಪ್ ಗೆಲುವು ವಿರೋಧಿಸಿ ಅಮೆರಿಕದ ಹಲವೆಡೆ ಪ್ರತಿಭಟನೆ
Screengrab | X/@dom_lucre
ವಾಷಿಂಗ್ಟನ್ : ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಡೊನಾಲ್ಡ್ ಟ್ರಂಪ್ ಫ್ಲೋರಿಡಾದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ವಿಜಯ ಭಾಷಣ ಮಾಡುತ್ತಿದ್ದಂತೆಯೇ ಫಿಲಡೆಲ್ಫಿಯಾ ಮತ್ತು ಚಿಕಾಗೋದಲ್ಲಿ ಸಾವಿರಾರು ಮಂದಿ ಬೀದಿಗಳಿದು ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.
ಗರ್ಭಪಾತ ಹಕ್ಕು, ತೃತೀಯ ಲಿಂಗಿಗಳ ಹಕ್ಕು ಹಾಗೂ ಬಂದೂಕು ಕಾನೂನಿಗೆ ಸಂಬಂಧಿಸಿ ಟ್ರಂಪ್ ಅವರ ನಿಲುವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯನ್ನು ವಿರೋಧಿಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಕೆಲವರು ಫೆಲೆಸ್ತೀನ್ ಮತ್ತು ಲೆಬನಾನ್ ನ ಧ್ವಜಗಳನ್ನು ಹಿಡಿದುಕೊಂಡಿದ್ದು ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧವನ್ನು ವಿರೋಧಿಸುವ ಘೋಷಣೆ ಕೂಗುತ್ತಿದ್ದರು ಎಂದು ವರದಿಯಾಗಿದೆ.
`ನಮ್ಮ ಅಧ್ಯಕ್ಷರಲ್ಲ' `ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ' ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಪ್ರಮುಖ ರಸ್ತೆಯಲ್ಲಿ ಹಾಗೂ ಟ್ರಂಪ್ ಅವರ ಹೋಟೆಲ್ ನ ಎದುರು ರ್ಯಾಲಿ ನಡೆಸಿದರು. ಹಲವೆಡೆ ರಸ್ತೆ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಟ್ರಂಪ್ ಅವರ ಚುನಾವಣಾ ಚಿಹ್ನೆಯನ್ನು ಹೊಂದಿದ್ದ ಧ್ವಜಕ್ಕೆ ಬೆಂಕಿ ಹಚ್ಚಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.