ಅಮೆರಿಕ: ಪೌರತ್ವಕ್ಕೆ ಸಂಬಂಧಿಸಿದ ಕಾರ್ಯಾದೇಶದಿಂದ ಪಾರಾಗಲು ಸಿಸೇರಿಯನ್ ಗೆ ಮೊರೆ!

ಸಾಂದರ್ಭಿಕ ಚಿತ್ರ PC: istockphoto.com
ವಾಷಿಂಗ್ಟನ್: ಅಮೆರಿಕದಲ್ಲಿ ಹುಟ್ಟಿನಿಂದಲೇ ಇರುವ ಪೌರತ್ವದ ಹಕ್ಕನ್ನು ಮೊಟಕುಗೊಳಿಸುವ ಸಂಬಂಧ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಾದೇಶಕ್ಕೆ ಸಹಿ ಮಾಡಿದ ಬೆನ್ನಲ್ಲೇ ಹೊಸ ಆದೇಶ ವಿಧಿಸಿದ ಫೆಬ್ರುವರಿ 20ರ ಗಡುವಿನ ಒಳಗಾಗಿ ಮಕ್ಕಳನ್ನು ಪಡೆಯಬೇಕು ಎಂಬ ಧಾವಂತದಿಂದ ಅವಧಿಪೂರ್ವ ಪ್ರಸವಕ್ಕಾಗಿ ಅಮೆರಿಕದಲ್ಲಿರುವ ಭಾರತೀಯ ದಂಪತಿಗಳು ಸಿಸೇರಿಯನ್ ಗೆ ಮೊರೆ ಹೋಗುವ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ.
ಸಂವಿಧಾನದ 14ನೇ ತಿದ್ದುಪಡಿ ಅಡಿಯಲ್ಲಿ ಹುಟ್ಟಿನಿಂದಲೇ ಲಭ್ಯವಾಗುವ ಪೌರತ್ವದ ಹಕ್ಕನ್ನು ರದ್ದುಗೊಳಿಸುವ ಸಂಬಂಧ ಡೊನಾಲ್ಡ್ ಟ್ರಂಪ್ ಅವರು ಆದೇಶ ಹೊರಡಿಸಿದ ಬಳಿಕ, ತಮ್ಮ ಮಕ್ಕಳಿಗೆ ಅಮೆರಿಕದ ಪೌರತ್ವ ದೊರಕಿಸುವ ಧಾವಂತದಲ್ಲಿ ಅವಧಿಪೂರ್ವದಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮಕ್ಕಳಿಗೆ ಜನ್ಮನೀಡಲು ಬಹಳಷ್ಟು ಗರ್ಭಿಣಿಯರು ಮುಂದಾಗಿದ್ದಾರೆ.
ಎಂಟು ಅಥವಾ ಒಂಬತ್ತನೇ ತಿಂಗಳ ಗರ್ಭಿಣಿಯರು ವೈದ್ಯರಲ್ಲಿ ಸಿಸೇರಿಯನ್ ಗಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಎರಡನೇ ಅಥವಾ ಮೂರನೇ ತ್ರೈಮಾಸಿಕ ಅವಧಿಯಲ್ಲಿರುವವರು ಕೂಡಾ ಇದೇ ಮಾರ್ಗವನ್ನು ಅನುಸರಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆದರೆ ತಾಯಿ ಹಾಗೂ ಮಗುವಿಗೆ ಎದುರಾಗಬಹುದಾದ ವಿವಿಧ ಆರೋಗ್ಯ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ ಈ ಪ್ರವೃತ್ತಿಯನ್ನು ವೈದ್ಯರು ಪ್ರೋತ್ಸಾಹಿಸುತ್ತಿಲ್ಲ ಎಂದು ಹೇಳಲಾಗಿದೆ. ಅವಧಿಪೂರ್ವ ಪ್ರಸವ ಎಂದರೆ 37 ವಾರಕ್ಕಿಂತ ಮೊದಲು ಆಗುವ ಹೆರಿಗೆ ಎಂದು ವಿಶ್ಲೇಷಿಸಲಾಗಿದೆ. ವಿಶ್ವ ಆರೋಗ್ಯಸಂಸ್ಥೆಯ ಪ್ರಕಾರ ಇಂಥ ಅವಧಿಪೂರ್ವ ಹೆರಿಗೆಯಿಂದಾಗುವ ಆರೋಗ್ಯ ಸಂಕೀರ್ಣತೆಗಳು ಐದು ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ.