ಆ್ಯಪಲ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ ಕೈಬರಹದ ಜಾಹೀರಾತು ರೂ. 1.4 ಕೋಟಿಗೆ ಮಾರಾಟ

ವಾಷಿಂಗ್ಟನ್: ಆ್ಯಪಲ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ ತನ್ನ ಆ್ಯಪಲ್-1 ಕಂಪ್ಯೂಟರ್ ಬಗ್ಗೆ ಕೈಬರಹದಲ್ಲಿ ಬರೆದ ಜಾಹೀರಾತು ಹರಾಜಿನಲ್ಲಿ ಸುಮಾರು 1.4 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ಆರ್‍ಆರ್ ಹರಾಜು ಸಂಸ್ಥೆ ಹೇಳಿದೆ.
ಇದು ಕ್ಯಾಲಿಫೋರ್ನಿಯಾದ ಅಂಗಡಿಯೊಂದರಲ್ಲಿ ಚಿತ್ರೀಕರಿಸಲಾದ ಕಂಪ್ಯೂಟರ್‍ನ ಮೂಲ ಮಾದರಿಯ ಎರಡು ಫೋಟೋಗಳನ್ನೂ ಒಳಗೊಂಡಿದೆ. ಈ ಚಿತ್ರದಲ್ಲಿ ಆ್ಯಪಲ್-1 ಕಂಪ್ಯೂಟರ್‍ನ ಬೋರ್ಡ್, ಕೀಬೋರ್ಡ್ ಮತ್ತು ಮಾನಿಟರ್ ಅನ್ನು ಕಾಣಬಹುದು. ಜತೆಗೆ ಆ್ಯಪಲ್ ಬೇಸಿಕ್ ಪ್ರೋಗ್ರಾಂ ಅನ್ನು ತೋರಿಸುವ ಆ್ಯಪಲ್-1 ಕಂಪ್ಯೂಟರ್ ಪರದೆಯನ್ನೂ ಪ್ರದರ್ಶಿಸಲಾಗಿದೆ. `ಆ್ಯಪಲ್ ಕಂಪ್ಯೂಟರ್-1' ಎಂಬ ಶೀರ್ಷಿಕೆಯ ಜಾಹೀರಾತಿನಲ್ಲಿ ಕಂಪ್ಯೂಟರ್‍ನ ಬಿಡಿಭಾಗಗಳ ವಿವರಣೆಯನ್ನು ನೀಡಲಾಗಿದೆ.
`ಈ ಕೈಬರಹದ ಜಾಹೀರಾತಿನಲ್ಲಿರುವ ತಾಂತ್ರಿಕ ವಿಶೇಷಣಗಳು ಆ್ಯಪಲ್‍ನ ಮೂಲ ಜಾಹೀರಾತಿನೊಂದಿಗೆ ಅಚ್ಚುಕಟ್ಟಾಗಿ ಹೊಂದಿಕೆಯಾಗುತ್ತದೆ. ಇದನ್ನು `ಇಂಟರ್‍ಫೇಸ್' ಮ್ಯಾಗಝಿನ್‍ನ 1976ರ ಜುಲೈ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಪ್ರಿಂಟ್ ಮಾಡಲಾಗಿದ್ದು ವಿಶ್ವದ ಅತ್ಯಂತ ಮೌಲ್ಯಯುತ ಮತ್ತು ಪ್ರಭಾವಶಾಲೀ ಸಂಸ್ಥೆಯ ಸಾರ್ವಜನಿಕ ಆರಂಭವನ್ನು ಗುರುತಿಸುತ್ತದೆ ಎಂದು ಆ್ಯಪಲ್ ಇತಿಹಾಸತಜ್ಞ ಕೋರೆ ಕೊಹೆನ್ ಅಭಿಪ್ರಾಯಪಟ್ಟಿದ್ದಾರೆ.