ದ್ವಿತೀಯ ಮಹಾಯುದ್ಧದ ಬಳಿಕ ದಾಖಲೆ ಸಂಖ್ಯೆಯಲ್ಲಿ ಸಶಸ್ತ್ರ ಸಂಘರ್ಷಗಳಿಗೆ ಸಾಕ್ಷಿಯಾದ 2023: ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದ್ವಿತೀಯ ಮಹಾಯುದ್ಧದ ಬಳಿಕ ಇತರ ಯಾವುದೇ ವರ್ಷಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಸಶಸ್ತ್ರ ಸಂಘರ್ಷಗಳು 2023ರಲ್ಲಿ ನಡೆದಿವೆ ಎಂದು ನೂತನ ಅಧ್ಯಯನ ವರದಿಯೊಂದು ತಿಳಿಸಿದೆ.
ಕಳೆದ ವರ್ಷ ಪ್ರಮುಖವಾಗಿ ಉಕ್ರೇನ್ ಮತ್ತು ಗಾಝಾ ಯುದ್ಧಗಳು ಸೇರಿದಂತೆ ವಿಶ್ವಾದ್ಯಂತ 59 ಸಶಸ್ತ್ರ ಸಂಘರ್ಷಗಳು ನಡೆದಿವೆ ಎಂದು ಒಸ್ಲೋದ ಪೀಸ್ ರೀಸರ್ಚ್ ಇನ್ಸ್ಟಿಟ್ಯೂಟ್ (ಪಿಆರ್ಐಒ) ತನ್ನ ವರದಿಯಲ್ಲಿ ಹೇಳಿದೆ.
ಈ ಪೈಕಿ ಆಫ್ರಿಕಾದಲ್ಲಿ 28,ಏಶ್ಯಾದಲ್ಲಿ 17 ಮತ್ತು ಮಧ್ಯ ಪ್ರಾಚ್ಯದಲ್ಲಿ 10 ಹಾಗೂ ಯುರೋಪ್ನಲ್ಲಿ ಮೂರು ಮತ್ತು ಅಮೆರಿಕದಲ್ಲಿ ಒಂದು ಸಶಸ್ತ್ರ ಸಂಘರ್ಷಗಳು ನಡೆದಿವೆ.
ಕಳೆದ ವರ್ಷ ಸಂಘರ್ಷಗಳ ಸಂಖ್ಯೆ ಹೆಚ್ಚಿದ್ದರೂ ಅವುಗಳಿಗೆ ಸಾಕ್ಷಿಯಾದ ದೇಶಗಳ ಸಂಖ್ಯೆ 2022ರಲ್ಲಿದ್ದ 39ರಿಂದ 34ಕ್ಕೆ ಇಳಿದಿದೆ.
ಏಶ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಐಸಿಸ್ ಕಾರ್ಯಕ್ಷೇತ್ರ ಹರಡಿರುವುದು ಘರ್ಷಣೆಗಳ ಹೆಚ್ಚಳಕ್ಕೆ ಭಾಗಶಃ ಕಾರಣವಾಗಿದೆ, ಜೊತೆಗೆ ಹೆಚ್ಚುತ್ತಿರುವ ದೇಶರಹಿತ ಉಗ್ರರು ಭಾಗಿಯಾಗಿರುವುದೂ ಇನ್ನೊಂದು ಕಾರಣವಾಗಿದೆ. ಇದು ಸಂತ್ರಸ್ತರಿಗೆ ನೆರವು ಗುಂಪುಗಳಂತಹ ಎನ್ಜಿಒಗಳ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸಿದೆ ಎಂದು ಪಿಆರ್ಐಒ ಸಂಶೋಧಕ ಮತ್ತು ವರದಿಯ ಮುಖ್ಯ ಲೇಖಕ ಸಿರಿ ಆಸ್ ರಸ್ಟಾಡ್ ಹೇಳಿದ್ದಾರೆ.
ಸ್ವೀಡನ್ನಿನ ಉಪ್ಸಾಲಾ ವಿವಿಯು ಸರಕಾರೇತರ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶಗಳ ಪ್ರಕಾರ ಕಳೆದ ವರ್ಷ ಯುದ್ಧದಲ್ಲಿ ಸತ್ತವರ ಸಂಖ್ಯೆ ಅರ್ಧಕ್ಕೆ ಅಂದರೆ 122,000ಕ್ಕೆ ಇಳಿದಿದೆ. ಆದರೆ 1989ರಿಂದೀಚಿಗೆ ಈ ಸಂಖ್ಯೆ ಈಗಲೂ ಮೂರನೇ ಅತ್ಯಧಿಕವಾಗಿದೆ ಮತ್ತು ಕಳೆದ ಮೂರು ದಶಕಗಳ ಯಾವುದೇ ಸಮಯಕ್ಕಿಂತ ಹೆಚ್ಚಿನ ಸಂಘರ್ಷ ಸಂಬಂಧಿತ ಸಾವುಗಳು ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿವೆ. ಈ ಪೈಕಿ ಅತ್ಯಂತ ಹೆಚ್ಚಿನ ಸಾವುಗಳು ಇಥಿಯೋಪಿಯಾದ ಟಿಗ್ರೇ ಪ್ರದೇಶದಲ್ಲಿನ ಅಂತರ್ಯುದ್ಧ,ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಮತ್ತು ಗಾಝಾದ ಮೇಲೆ ಇಸ್ರೇಲ್ ದಾಳಿಗಳಲ್ಲಿ ಸಂಭವಿಸಿವೆ ಎಂದು ವರದಿಯು ತಿಳಿಸಿದೆ.
ಶೀತಲ ಸಮರ ಅಂತ್ಯಗೊಂಡ ಬಳಿಕ ವಿಶ್ವದಲ್ಲಿ ಹಿಂಸಾಚಾರವು ಈಗ ಸಾರ್ವಕಾಲಿಕ ಎತ್ತರವನ್ನು ತಲುಪಿದೆ ಎಂದೂ ರಸ್ಟಾಡ್ ಹೇಳಿದ್ದಾರೆ.