ಶೇಕ್ ಹಸೀನಾ ರಾಜಿನಾಮೆ ಬೆನ್ನಲ್ಲೇ ಬಾಂಗ್ಲಾದಲ್ಲಿ ಸೇನಾಡಳಿತ ಜಾರಿ
►ದೇಶದಲ್ಲಿ ಹಂಗಾಮಿ ಸರ್ಕಾರ ರಚಿಸಲಾಗುವುದು: ಸೇನಾ ಮುಖ್ಯಸ್ಥ ►ಯಾರ ಮೇಲೂ ಗುಂಡು ಹಾರಿಸದಂತೆ ಆದೇಶ
ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ (Photo: IANS)
ಢಾಕಾ: ಬಾಂಗ್ಲಾದೇಶದಲ್ಲಿ ಮೀಸಲಾತಿ ಕುರಿತು ವ್ಯಾಪಕ ಪ್ರತಿಭಟನೆಗಳು ನೂರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದ ನಂತರ ಇಂದು ತಮ್ಮ ಹುದ್ದೆಗೆ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿರುವ ಬೆನ್ನಿಗೆ ಬಾಂಗ್ಲಾದೇಶದಲ್ಲಿ ಹಂಗಾಮಿ ಸರ್ಕಾರ ರಚಿಸಲಾಗುವುದು ಎಂದು ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಶಾಂತಿಗೆ ಕರೆ ನೀಡಿದ್ದಾರೆ. "ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲಾಗುವುದು ಹಾಗೂ ಇಂದು ರಾತ್ರಿಯೊಳಗೆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು,” ಎಂದು ಅವರು ಭರವಸೆ ನೀಡಿದ್ದಾರೆ.
“ಮಿಲಿಟರಿ ಮೇಲೆ ನಂಬಿಕೆಯಿರಿಸಿ, ನಾವು ಎಲ್ಲಾ ಸಾವುಗಳ ತನಿಖೆ ನಡೆಸಿ ಅದಕ್ಕೆ ಹೊಣೆಗಾರರಾದವರನ್ನು ಶಿಕ್ಷಿಸುತ್ತೇವೆ. ಯಾವುದೇ ಸೇನೆ ಅಥವಾ ಪೊಲೀಸರು ಗುಂಡು ಹಾರಿಸಬಾರದೆಂದು ಆದೇಶಿಸಿದ್ದೇನೆ,” ಎಂದು ಹೇಳಿದರು.
“ವಿದ್ಯಾರ್ಥಿಗಳ ಕರ್ತವ್ಯ ಶಾಂತಿಯಿಂದಿದ್ದು ನಮ್ಮೊಂದಿಗೆ ಸಹಕರಿಸುವುದಾಗಿದೆ,” ಎಂದು ಅವರು ಹೇಳಿದರು.
ಶೇಖ್ ಹಸೀನಾ ಅವರು ದೇಶ ತೊರೆದಿದ್ದಾರೆನ್ನಲಾಗಿದ್ದು ಅವರಿದ್ದ ಹೆಲಿಕಾಪ್ಟರ್ ಭಾರತದತ್ತ ಸಾಗುತ್ತಿದೆ ಎನ್ನಲಾಗಿದೆ.
ಶೇಖ್ ಹಸೀನಾ ಅವರ ಅರಮನೆಗೆ ಪ್ರತಿಭಟನಾಕಾರರು ನುಗ್ಗಿದ್ದು, ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ.