ಫಿಲಡೆಲ್ಫಿ ಕಾರಿಡಾರ್ ನಿಂದ ಸೇನೆ ಹಿಂಪಡೆಯುವುದಿಲ್ಲ: ನೆತನ್ಯಾಹು
ಬೆಂಜಮಿನ್ ನೆತನ್ಯಾಹು | PC ; PTI
ಜೆರುಸಲೇಮ್: ಗಾಝಾ ಮತ್ತು ಈಜಿಪ್ಟ್ ನಡುವಿನ ಗಡಿಭಾಗದ ಫಿಲಡೆಲ್ಫಿ ಕಾರಿಡಾರ್ ನಿಂದ ಇಸ್ರೇಲ್ ಪಡೆಗಳನ್ನು ಹಿಂಪಡೆಯಲು ಇಸ್ರೇಲ್ ಸಮ್ಮತಿಸಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿದೆ.
ಸಚಿವ ಸಂಪುಟದಲ್ಲಿ ನಿರ್ಧರಿಸಿದ ರೀತಿಯಲ್ಲಿ ಯುದ್ಧದ ಎಲ್ಲಾ ಗುರಿಗಳನ್ನೂ ಸಾಧಿಸಲು ಇಸ್ರೇಲ್ ಬದ್ಧವಾಗಿದೆ. ಗಾಝಾ ಮತ್ತೆ ಎಂದಿಗೂ ಇಸ್ರೇಲ್ನ ಭದ್ರತೆಗೆ ಬೆದರಿಕೆಯಾಗದು ಎಂಬುದನ್ನು ಖಚಿತಪಡಿಸಲಿದ್ದೇವೆ. ಇದಕ್ಕೆ ದಕ್ಷಿಣದ ಗಡಿಯನ್ನು ಭದ್ರಪಡಿಸುವ ಅಗತ್ಯವಿದೆ ಎಂದು ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಬುಧವಾರ ಬೆಂಜಮಿನ್ ನೆತನ್ಯಾಹುಗೆ ದೂರವಾಣಿ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ `ಗಾಝಾ ಕದನ ವಿರಾಮ ಒಪ್ಪಂದ ಹಾಗೂ ಒತ್ತೆಯಾಳು ಬಿಡುಗಡೆ ಕುರಿತ ಮಾತುಕತೆಯ ಪ್ರಗತಿಯ ಬಗ್ಗೆ ಚರ್ಚಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಕದನ ವಿರಾಮ ಒಪ್ಪಂದದ ವಿಷಯದಲ್ಲಿ ಇಸ್ರೇಲ್-ಹಮಾಸ್ ನಡುವಿನ ಭಿನ್ನಾಭಿಪ್ರಾಯವನ್ನು ನಿವಾರಿಸಲು ಅಮೆರಿಕ ಮುಂದಿರಿಸಿದ ಹೊಸ ಪ್ರಸ್ತಾಪದ ಬಗ್ಗೆ ಸಂಧಾನ ಮಾತುಕತೆಯ ಪ್ರಮುಖ ಮಧ್ಯವರ್ತಿ ಈಜಿಪ್ಟ್ ನ ಅಧಿಕಾರಿಯೊಬ್ಬರು ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಹೊಸ ಪ್ರಸ್ತಾಪವನ್ನು ಹಲವಾರು ಕಾರಣಗಳಿಗಾಗಿ ಹಮಾಸ್ ಒಪ್ಪದು. ಅಮೆರಿಕನ್ನರು ಭರವಸೆಯನ್ನು ನೀಡುತ್ತಿದ್ದಾರೆ ಆದರೆ ಗ್ಯಾರಂಟಿಯನ್ನಲ್ಲ. ಹಮಾಸ್ ಇದನ್ನು ಖಂಡಿತಾ ಒಪ್ಪದು. ಯಾಕೆಂದರೆ ಈ ಪ್ರಸ್ತಾಪದ ಪ್ರಕಾರ, 6 ವಾರಗಳ ಯುದ್ಧ ವಿರಾಮಕ್ಕೆ ಪ್ರತಿಯಾಗಿ ಹಮಾಸ್ ನಾಗರಿಕ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು. ಆದರೆ ಶಾಶ್ವತ ಕದನ ವಿರಾಮದ ಉಲ್ಲೇಖವೇ ಇದರಲ್ಲಿಲ್ಲ' ಎಂದು ಸಂಧಾನ ಮಾತುಕತೆಯಲ್ಲಿ ಈಜಿಪ್ಟ್ ನಿಯೋಗದಲ್ಲಿದ್ದ ಅಧಿಕಾರಿಯನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
ಜತೆಗೆ, ಗಾಝಾದಲ್ಲಿ ಕಾರ್ಯತಂತ್ರದ ದೃಷ್ಟಿಯಲ್ಲಿ ಪ್ರಮುಖವಾಗಿರುವ ಎರಡು ಕಾರಿಡಾರ್ ಗಳಾದ ಫಿಲಡೆಲ್ಫಿ ಮತ್ತು ನೆಟ್ಜಾರಿಮ್ ಪೂರ್ವ-ಪಶ್ಚಿಮ ಕಾರಿಡಾರ್ ನಿಂದ ಇಸ್ರೇಲ್ ತನ್ನ ಪಡೆಗಳನ್ನು ಹಿಂಪಡೆಯುವ ಬಗ್ಗೆ ಪ್ರಸ್ತಾವನೆಯಲ್ಲಿ ಸ್ಪಷ್ಟ ಉಲ್ಲೇಖವಿಲ್ಲ. ಈ ಎರಡೂ ಕಾರಿಡಾರ್ಗಳಲ್ಲಿ ತನ್ನ ಪಡೆಗಳ ಉಪಸ್ಥಿತಿಯನ್ನು ಕಡಿಮೆಗೊಳಿಸುವುದಾಗಿ ಇಸ್ರೇಲ್ ಹೇಳುತ್ತಿದೆ. ಇದು ನಮಗೆ ಮತ್ತು ಹಮಾಸ್ಗೆ ಸ್ವೀಕಾರಾರ್ಹವಲ್ಲ ಎಂದವರು ಹೇಳಿದ್ದಾರೆ. ಈ ಎರಡೂ ಕಾರಿಡಾರ್ ಗಳಿಂದ ಇಸ್ರೇಲ್ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೆ ಗಾಝಾಕ್ಕೆ ಸಂಪರ್ಕ ಕಲ್ಪಿಸುವ ರಫಾ ಗಡಿದಾಟು(ಕ್ರಾಸಿಂಗ್) ಅನ್ನು ತೆರೆಯುವುದಿಲ್ಲ ಎಂದು ಇಸ್ರೇಲ್ ಮತ್ತು ಅಮೆರಿಕಕ್ಕೆ ಸ್ಪಷ್ಟಪಡಿಸಿರುವುದಾಗಿ ಈಜಿಪ್ಟ್ ಹೇಳಿದೆ.