ಬಂಧನ ಸಾಕಾಗದು, ನೆತನ್ಯಾಹುಗೆ ಮರಣದಂಡನೆ ವಿಧಿಸಬೇಕು: ಇರಾನ್ನ ಪರಮೋಚ್ಛ ನಾಯಕ ಖಾಮಿನೈ ಆಗ್ರಹ
ಅಯತುಲ್ಲಾ ಆಲಿ ಖಾಮಿನೈ | PC : AP
ಟೆಹ್ರಾನ್: ಇಸ್ರೇಲಿ ನಾಯಕರ ವಿರುದ್ಧ ಬಂಧನ ವಾರಾಂಟ್ ಸಾಕಾಗದು. ಮರಣದದಂಡನೆ ವಿಧಿಸಬೇಕು ಎಂದು ಇರಾನ್ನ ಪರಮೋಚ್ಛ ನಾಯಕ ಅಯತುಲ್ಲಾ ಆಲಿ ಖಾಮಿನೈ ಸೋಮವಾರ ಆಗ್ರಹಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ(ಐಸಿಸಿ) ಗುರುವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ನ ಮಾಜಿ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹಾಗೂ ಹಮಾಸ್ ನಾಯಕ ಇಬ್ರಾಹಿಂ ಅಲ್-ಮಸ್ರಿ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾಮಿನೈ `ಈ ಕ್ರಿಮಿನಲ್ ನಾಯಕರಿಗೆ ಮರಣದಂಡನೆ ವಿಧಿಸಬೇಕಾಗಿದೆ. ಈಗ ಇಸ್ರೇಲ್ ಕೈಗೊಳ್ಳುತ್ತಿರುವ ಕ್ರಮಗಳು ವಿಜಯವಲ್ಲ, ಅವು ಯುದ್ಧಾಪರಾಧಗಳು' ಎಂದಿದ್ದಾರೆ.
ಜನರ ಮನೆಗೆ ಬಾಂಬ್ ಹಾಕುವುದು ಜಯವಲ್ಲ. ಜನರ ಮನೆಗೆ ಬಾಂಬ್ ಹಾಕಿದರೆ, ಆಸ್ಪತ್ರೆಗಳಿಗೆ, ಜನರ ಸಮೂಹದ ಮೇಲೆ ಬಾಂಬ್ ಹಾಕಿದಾಕ್ಷಣ ಗೆಲುವು ಸಾಧಿಸಿದ್ದೇವೆ ಎಂದು ಈ ಮೂರ್ಖರು ಭಾವಿಸಬಾರದು. ಜಗತ್ತಿನ ಯಾರೂ ಕೂಡಾ ಇದನ್ನು ಗೆಲುವೆಂದು ಪರಿಗಣಿಸುವುದಿಲ್ಲ. ಇವು ಗೆಲುವಲ್ಲ. ಅವರು ಲೆಬನಾನ್, ಗಾಝಾ ಮತ್ತು ಪೆಲೆಸ್ತೀನ್ನಲ್ಲಿ ನಡೆಸುತ್ತಿರುವ ಅಪರಾಧಗಳು ಅಂತಿಮವಾಗಿ ಅವರಿಗೇ ತಿರುಗು ಬಾಣವಾಗಲಿದೆ. ಅಂತಿಮವಾಗಿ ಅದು ಪ್ರತಿರೋಧವನ್ನು ಬಲಿಷ್ಟಗೊಳಿಸುತ್ತದೆ ಎಂದು ಖಾಮಿನೈ ಹೇಳಿರುವುದಾಗಿ ವರದಿಯಾಗಿದೆ.