ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದ ನ್ಯೂಯಾರ್ಕ್ ನ್ಯಾಯಾಲಯ
ಉದ್ಯಮಿ ಗೌತಮ್ ಅದಾನಿ (Photo: PTI)
ಅಮೆರಿಕ: ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿ 2,237 ಕೋಟಿ ರೂ. ಲಂಚ ಮತ್ತು ವಂಚನೆ ಆರೋಪದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ನ್ಯೂಯಾರ್ಕ್ ನ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿದೆ.
2,237 ಕೋಟಿ ರೂ. ಲಂಚದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್ ಸೇರಿದಂತೆ ಆರೋಪಿಗಳ ವಿರುದ್ಧ ಐದು ಅಂಶಗಳ ಕ್ರಿಮಿನಲ್ ಆರೋಪಪಟ್ಟಿಯನ್ನು ನ್ಯೂಯಾಕ್ ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಅಮೆರಿಕದ ಪ್ರಾಸಿಕ್ಯೂಟರ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಭಾರತದ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಲಾಭವನ್ನು ನಿರೀಕ್ಷಿಸುವ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚವನ್ನು ನೀಡಿದ ಮತ್ತು ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಇವರ ಮೇಲಿದೆ. ಇದಲ್ಲದೆ ಇತರ ಆರೋಪಿಗಳು ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಆರೋಪವನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನ್ಯಾಯಾಧೀಶರು ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಬಂಧನ ವಾರಂಟ್ ಗಳನ್ನು ಹೊರಡಿಸಿದ್ದಾರೆ ಮತ್ತು ಆ ವಾರಂಟ್ ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್ ಗಳು ಯೋಜಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತವೆ.