ಕೃತಕ ಬುದ್ಧಿಮತ್ತೆ (ಎಐ) ಶಸ್ತ್ರಚಿಕಿತ್ಸೆಯ ಬಳಿಕ ಸಂವೇದನಾ ಶಕ್ತಿ ಮರಳಿ ಪಡೆದ ವ್ಯಕ್ತಿ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ವಾಹನ ಅಪಘಾತದಿಂದ ಪಾಶ್ರ್ವವಾಯುವಿಗೆ ಒಳಗಾದ ಅಮೆರಿಕದ ವ್ಯಕ್ತಿಯೊಬ್ಬ ಕೃತಕ ಬುದ್ಧಿಮತ್ತೆ(ಎಐ) ಮೂಲಕ ನಡೆಸಲಾದ ಶಸ್ತ್ರಚಿಕಿತ್ಸೆಯ ಬಳಿಕ ಪವಾಡ ಸದೃಶವಾಗಿ ಚಲನಾ ಶಕ್ತಿಯನ್ನು ಮರಳಿ ಪಡೆದಿದ್ದಾನೆ ಎಂದು ವರದಿಯಾಗಿದೆ.
3 ವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಕುತ್ತಿಗೆಯ ನರಕ್ಕೆ ಏಟುಬಿದ್ದು ಪಾಶ್ರ್ವವಾಯುವಿಗೆ ಒಳಗಾಗಿದ್ದ 45 ವರ್ಷದ ಕೀತ್ ಥಾಮಸ್ ಎಂಬ ವ್ಯಕ್ತಿಯ ಶಸ್ತ್ರಚಿಕಿತ್ಸೆಯನ್ನು ನ್ಯೂಯಾರ್ಕ್ನ ಮ್ಯಾನ್ಹಸೆಟ್ನಲ್ಲಿರುವ ಫೆಯ್ನ್ಸ್ಟೈಯ್ನ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್ನಲ್ಲಿ ನಡೆದಿದೆ. ಮೈಕ್ರೊಇಲೆಕ್ಟ್ರಾಡ್ ಇಂಪ್ಲಾಂಟ್ಗಳ ಮೂಲಕ ತನ್ನ ಮೆದುಳಿಗೆ ಕಂಪ್ಯೂಟರ್ ಅನ್ನು ಸಂಪರ್ಕಿಸುವ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ತನ್ನ ದೇಹದಲ್ಲಿ ಚಲನಾಶಕ್ತಿ ಮತ್ತು ಸಂವೇದನೆ ಮರಳಿ ಪಡೆದಿದ್ದೇನೆ ಎಂದು ಥಾಮಸ್ ಹೇಳಿರುವುದಾಗಿ ವರದಿಯಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಮುನ್ನಡೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.