ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ನಷ್ಟ: ಅಧ್ಯಯನ ವರದಿ
ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರಗತಿ ಮತ್ತು ಬೆಳವಣಿಗೆಯ ಬಗ್ಗೆ ಜನತೆ ಆತಂಕಗೊಳ್ಳುತ್ತಿರುವಂತೆಯೇ, ಈ ದಶಕದ ಅಂತ್ಯದ ವೇಳೆಗೆ ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕೃತಗೊಂಡ ಬೆಳವಣಿಗೆಯ ಕಾರಣದಿಂದ ಉದ್ಯೋಗ ಕಳೆದುಕೊಳ್ಳುವವರಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚಿರಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಕೆಲಸದ ಸ್ಥಳದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಯಾಂತ್ರೀಕೃತ ವ್ಯವಸ್ಥೆಯಿಂದಾಗಿ ಪ್ರತೀ 10ರಲ್ಲಿ 8 ಮಹಿಳೆಯರು ಮತ್ತೊಂದು ಸಂಸ್ಥೆಗೆ ಸೇರಬೇಕಾದ ಅಥವಾ ಕೆಲಸ ಕಳೆದುಕೊಳ್ಳುವ ಅನಿವಾರ್ಯತೆಗೆ ಸಿಲುಕಲಿದ್ದಾರೆ ಎಂದು ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾಂತ್ರೀಕೃತಗೊಂಡ ಕಾರಣದಿಂದ ಹೆಚ್ಚು ಉದ್ಯೋಗ ಕಡಿತಗೊಳ್ಳುವ ನಿರೀಕ್ಷೆಯಿರುವ ಕ್ಷೇತ್ರಗಳಲ್ಲಿ ಆಹಾರ ಸೇವೆ, ಗ್ರಾಹಕರ ಸೇವೆ, ಮಾರಾಟ ಮತ್ತು ಕಚೇರಿ ಸೇವೆಗಳು ಸೇರಿವೆ. ಈಗ ಈ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಹೆಚ್ಚಿದೆ, ವೇತನ ಕಡಿಮೆಯಿರುವುದು ಇದಕ್ಕೆ ಕಾರಣವಾಗಿರಬಹುದು. ಕಚೇರಿ ಸೇವೆ, ಗ್ರಾಹಕರ ಸೇವೆ ಕ್ಷೇತ್ರಗಳಲ್ಲೂ ಮಹಿಳೆಯರ ಪ್ರಮಾಣ ಹೆಚ್ಚಿದೆ.
ಈ ಎರಡೂ ಕ್ಷೇತ್ರಗಳಲ್ಲಿ 2030ರ ವೇಳೆಗೆ ಉದ್ಯೋಗದ ಪ್ರಮಾಣ ಕ್ರಮವಾಗಿ 3.7 ದಶಲಕ್ಷ ಮತ್ತು 2 ದಶಲಕ್ಷದಷ್ಟು ಕಡಿಮೆಯಾಗಬಹುದು . ಇತರ ಕಡಿಮೆ ವೇತನದ ಉದ್ಯೋಗಗಳು ಕುಸಿಯಬಹುದು. ಚಿಲ್ಲರೆ ಮಾರಾಟಗಾರರು, ಕ್ಯಾಷಿಯರ್ಗಳು ಸೇರಿದಂತೆ ಮಹಿಳೆಯರು ಹೊಂದಿರುವ ಇತರ ಕಡಿಮೆ ವೇತನದ ಉದ್ಯೋಗಗಳ ಮೇಲೂ ಪರಿಣಾಮವಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಪರಿಣಾಮವಾಗಿ, ಮಹಿಳೆಯರು ಕೆಲಸದ ಸ್ಥಳದಲ್ಲಿ ಪ್ರಸ್ತುತವಾಗಿರಲು ಮತ್ತು ಇತರ ಹುದ್ದೆಗಳಿಗೆ ಸ್ಥಳಾಂತರಗೊಳ್ಳಲು ತಮ್ಮ ಕೌಶಲ್ಯವನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಯಾಂತ್ರೀಕೃತ ವ್ಯವಸ್ಥೆಯೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಕಲಿಯುವ ಸಾಮರ್ಥ್ಯವುಳ್ಳ ಜನರನ್ನು ನೇಮಿಸಿಕೊಳ್ಳುವಂತೆ ಮತ್ತು ಅವರಿಗೆ ತರಬೇತಿ ನೀಡುವಂತೆ ಸಂಸ್ಥೆಗೆ ಸಲಹೆ ನೀಡಲಾಗಿದೆ. ಅಮೆರಿಕದ ಕನಿಷ್ಟ 12 ದಶಲಕ್ಷ ಕೆಲಸಗಾರರು 2030ರ ಅಂತ್ಯದೊಳಗೆ ತಮ್ಮ ಉದ್ಯೋಗಗಳನ್ನು ಬದಲಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.
ವರದಿಯ ಅಂಶಗಳು ದಿಗ್ಭ್ರಮೆಗೊಳಿಸುವಂತಿದೆ. ಆದರೂ ಬಡಗಿ ಕೆಲಸ, ಇಲೆಕ್ಟ್ರೀಷಿಯನ್ ಕೆಲಸಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ನಿರ್ವಹಿಸುವುದು ಸುಲಭವಲ್ಲ. ಆದ್ದರಿಂದ ಈ ಕ್ಷೇತ್ರಗಳು ಸಧ್ಯಕ್ಕೆ ಸುರಕ್ಷಿತ ಎಂದು ಹೇಳಬಹುದು.
ಈ ಕ್ಷೇತ್ರದಲ್ಲಿ ಪುರುಷರ ಪ್ರಾತಿನಿಧ್ಯ ಹೆಚ್ಚಿದೆ ಎಂಬುದನ್ನು ಗಮನಿಸಬಹುದು' ಎಂದು ಆರ್ಥಿಕ ತಜ್ಞ ಜುಲಿಯಾ ಪೊಲಾಕ್ ಹೇಳಿದ್ದಾರೆ. ಸುಮಾರು 300 ದಶಲಕ್ಷ ಉದ್ಯೋಗಗಳು ಉತ್ಪಾದಕ ಎಐನಿಂದ ಪ್ರಭಾವಿತವಾಗಬಹುದು. ಚಾಟ್ ಜಿಪಿಟಿಯಂತಹ ಉತ್ಪಾದಕ ಎಐ ವ್ಯವಸ್ಥೆಗಳು ಮಾನವ ಉತ್ಪಾದನೆಗೆ ಹೋಲುವ ವಸ್ತುಗಳನ್ನು ರೂಪಿಸಬಹುದು ಮತ್ತು ಮುಂದಿನ ದಶಕದಲ್ಲಿ ಉತ್ಪಾದಕತೆಯ ಉತ್ಕರ್ಷವನ್ನು ಉಂಟು ಮಾಡಬಹುದು ಎಂದು 2023ರ ಮಾರ್ಚ್ನಲ್ಲಿ ಗೋಲ್ಡ್ಮನ್ ಸ್ಯಾಚ್ ವರದಿ ಹೇಳಿತ್ತು.