ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಆಗಮಿಸುತ್ತಿದ್ದಂತೆ ಕಲ್ಪನಾ ಚಾವ್ಲಾ ಅವರನ್ನು ನೆನಪಿಸಿಕೊಂಡ ಜಗತ್ತು!

ಸುನೀತಾ ವಿಲಿಯಮ್ಸ್ | ಕಲ್ಪನಾ ಚಾವ್ಲಾ
ಹೊಸದಿಲ್ಲಿ : ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಬುಚ್ ವಿಲ್ಮೋರ್ ಅವರೊಂದಿಗೆ ಬುಧವಾರ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅವರ ಅನಿರೀಕ್ಷಿತ ಸುದೀರ್ಘ ವಾಸ್ತವ್ಯವು ಕೊನೆಯಾಯಿತು. ವಿಲಿಯಮ್ಸ್ ಮತ್ತು ವಿಲ್ಮೋರ್ ಜೊತೆಗೆ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರು ಸ್ಪೇಸ್ಎಕ್ಸ್ನ ಡ್ರ್ಯಾಗನ್ ಕ್ಯಾಪ್ಸುಲ್ನಲ್ಲಿ ಫ್ಲೋರಿಡಾದ ಕಡಲ ತೀರಕ್ಕೆ ಬಂದಿಳಿದರು.
ಸುನೀತಾ ವಿಲಿಯಮ್ಸ್ ಅವರನ್ನು ಜಗತ್ತು ಸ್ವಾಗತಿಸುತ್ತಿದ್ದಂತೆ, ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಭಾರತೀಯ ಮೂಲದ ಮತ್ತೋರ್ವ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರನ್ನು ಅನೇಕರು ನೆನಪಿಸಿಕೊಂಡರು. ಚಾವ್ಲಾ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮೂಲದ ಅಮೆರಿಕದ ಮಹಿಳೆ. ಅವರು ತಮ್ಮ ಕನಸುಗಳನ್ನು ಈಡೇರಿಸಲು ಲಕ್ಷಾಂತರ ಜನರನ್ನು ಪ್ರೇರೇಪಿಸಿದರು.
ಸುನಿತಾ ವಿಲಿಯಮ್ಸ್ :
2024ರ ಜೂನ್ 5ರಂದು ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. 8 ದಿನಗಳ ಕಾರ್ಯಾಚರಣೆಗಾಗಿ ತೆರಳಿದ್ದ ಇವರು ಆ ಬಳಿಕ ಭೂಮಿಗೆ ಮರಳಬೇಕಿತ್ತು. ಆದರೆ, ಸ್ಟಾರ್ಲೈನರ್ನಲ್ಲಿನ ತಾಂತ್ರಿಕ ಸಮಸ್ಯೆಗಳು ಗಗನಯಾತ್ರಿಗಳನ್ನು ಅವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಉಳಿಯುವಂತೆ ಮಾಡಿತು. ನಾಸಾ ರಾಕೆಟ್ ಗಗನಯಾತ್ರಿಗಳನ್ನು ಬಾಹ್ಯಾಕಾಶ ಕೇಂದ್ರದಲ್ಲೇ ಬಿಟ್ಟು ಭೂಮಿಗೆ ಮರಳಿತು. ಇದಾದ ಬಳಿಕ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಯತ್ನ ಹಲವು ಬಾರಿ ನಡೆದಿವೆ. ಆದರೆ, ಅದು ವಿಫಲವಾಗಿತ್ತು. ಸುರಕ್ಷತಾ ಕಾಳಜಿಯ ಕಾರಣದಿಂದ ಅವರು ವಾಪಾಸ್ಸು ಬರುವುದು ಹಲವು ಬಾರಿ ವಿಳಂಬವಾಯಿತು. ಇದೀಗ ನಾಸಾ ಮತ್ತು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜಂಟಿ ಕಾರ್ಯಾಚರಣೆಯ ಫಲವಾಗಿ ಗಗನಯಾತ್ರಿಗಳನ್ನು ಯಶಸ್ವಿಯಾಗಿ ಭೂಮಿಗೆ ಕರೆ ತರಲಾಗಿದೆ.
ನಾಲ್ವರು ಗಗನಯಾತ್ರಿಗಳಿದ್ದ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಮಾರ್ಚ್ 18ರಂದು ಐಎಸ್ಎಸ್ ನಿಂದ ಯಶಸ್ವಿಯಾಗಿ ಅನ್ಡಾಕ್ ಮಾಡಲ್ಪಟ್ಟಿದೆ. 17 ಗಂಟೆಗಳ ಪ್ರಯಾಣದ ನಂತರ ಕ್ಯಾಪ್ಸುಲ್ ಫ್ಲೋರಿಡಾದ ಕಡಲ ತೀರಕ್ಕೆ ಬಂದಿಳಿಯಿತು.
ಕಲ್ಪನಾ ಚಾವ್ಲಾ :
ಬಾಹ್ಯಾಕಾಶಾಕ್ಕೆ ತೆರಳಿದ ಭಾರತದ ಮೊದಲ ಮಹಿಳೆ ಕಲ್ಪನಾ ಚಾವ್ಲಾ. 1962ರ ಮಾರ್ಚ್ 17ರಂದು ಹರ್ಯಾಣದ ಕರ್ನಲ್ನಲ್ಲಿ ಜನಿಸಿದ ಕಲ್ಪನಾ ಚಾವ್ಲಾ ಚಿಕ್ಕ ವಯಸ್ಸಿನಲ್ಲಿಯೇ ವಿಮಾನ ಹಾಗೂ ಬಾಹ್ಯಾಕಾಶದ ಬಗ್ಗೆ ವಿಪರೀತ ಆಸಕ್ತಿಯನ್ನು ಹೊಂದಿದ್ದರು. ಕಲ್ಪನಾ ಚಾವ್ಲಾ ಪಂಜಾಬ್ನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕಲ್ ಇಂಜಿನೀಯರಿಂಗ್ ಪದವಿಯನ್ನು ಪಡೆದು ಅಮೆರಿಕಾದತ್ತ ಹಾರಿದರು. ಅಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ನಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ 1984ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆ ಬಳಿಕ ಕೊಲೊರಾಡೋ ವಿಶ್ವವಿದ್ಯಾಲಯದಲ್ಲಿ 1988ರಲ್ಲಿ ಇದೇ ವಿಷಯದಲ್ಲಿ ಪಿಹೆಚ್ಡಿಯನ್ನು ಕೂಡ ಪೂರ್ಣಗೊಳಿಸಿದರು.
ಮೊದಲ ಬಾರಿ ಅಂದ್ರೆ 1997ರಲ್ಲಿ ಎಸ್ ಟಿಎಸ್-87 ಎಂಬ ಸ್ಪೇಸ್ ಶಟಲ್ ಕೊಲಂಬಿಯಾದಿಂದ ಬಾಹ್ಯಾಕಾಶಕ್ಕೆ ನೆಗೆಯಿತು. ಇದರಲ್ಲಿ ಕಲ್ಪನಾ ರೋಬೋಟಿಕ್ ಆರ್ಮ್ ಆಪರೇಟರ್ ತಜ್ಞೆಯಾಗಿ ಕಾರ್ಯ ನಿರ್ವಹಿಸಿದರು.
ಎರಡನೇ ಬಾರಿಗೆ STS-107 ಎಂಬ ಹೆಸರಿನ ಇನ್ನೊಂದು ಯಾನದಲ್ಲಿ ಗಗನಯಾತ್ರಿಯಾಗಿ ಪ್ರಯಾಣಿಸಲು ಕಲ್ಪನಾ ಅವರು ಆಯ್ಕೆಯಾದರು. ಆದರೆ, ಹಲವಾರು ತಾಂತ್ರಿಕ ಕಾರಣಗಳಿಂದ ಪ್ರಯಾಣ ಮುಂದೂಡಲಾಯಿತು. ಕೊನೆಗೆ ಎಲ್ಲಾ ತಾಂತ್ರಿಕ ತೊಂದರೆಗಳನ್ನು ಪರಿಹರಿಸಿ 2003ರ ಜನವರಿ 16ರಂದು ಗಗನನೌಕೆ ಉಡಾವಣೆಯಾಯಿತು. 2003ರಲ್ಲಿ ಕೊಲಂಬಿಯಾದಿಂದ ಕಲ್ಪನಾ ಬಾಹ್ಯಾಕಾಶಯಾನ ಕೈಗೊಂಡಿದ್ದರು. ಸುಮಾರು 15 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ತಂಡ ತಮ್ಮ ಕರ್ತವ್ಯವನ್ನು ನಿರ್ವಹಿಸಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಹಿಂದಿರುಗಿತು. ಆದರೆ, ಭೂಮಿ ತಲುಪಲು ಕೇವಲ 16 ನಿಮಿಷಗಳು ಬಾಕಿಯಿರುವಾಗ ಸ್ಪೇಸ್ ನೌಕೆ ಗಗನದಲ್ಲಿಯೇ ಬೆಂಕಿಯಿಂದ ಹೊತ್ತಿ ಉರಿಯಿತು. ಎಲ್ಲಾ ಗಗನಯಾತ್ರಿಗಳು ಮೃತಪಟ್ಟರು.