ಸಮುದ್ರದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ 59 ರೊಹಿಂಗ್ಯಾ ನಿರಾಶ್ರಿತರ ರಕ್ಷಣೆ
ಸಾಂದರ್ಭಿಕ ಚಿತ್ರ |Photo : depositphotos
ಜಕಾರ್ತ, ಮಾ.21: ಇಂಡೋನೇಶ್ಯದ ಉತ್ತರದ ಕರಾವಳಿ ಬಳಿ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ದೋಣಿಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ 59 ರೊಹಿಂಗ್ಯಾ ನಿರಾಶ್ರಿತರನ್ನು ಇಂಡೋನೇಶ್ಯದ ರಕ್ಷಣಾ ನೌಕೆ ಗುರುವಾರ ರಕ್ಷಿಸಿದೆ.
ದೋಣಿಯಲ್ಲಿ ಸುಮಾರು 100 ಮಂದಿಯಿದ್ದರು ಎಂದು ಪ್ರಾಥಮಿಕ ವರದಿ ಹೇಳಿದೆ. ಬುಧವಾರ ರಾತ್ರಿ ಸಮುದ್ರದಲ್ಲಿ ದೋಣಿ ಮುಳುಗಿದ್ದು ಸ್ಥಳೀಯ ಮೀನುಗಾರರು 6 ಮಂದಿಯನ್ನು ರಕ್ಷಿಸಿ ದಡಕ್ಕೆ ಸಾಗಿಸಿದ್ದರು. ಮಕ್ಕಳು, ಮಹಿಳೆಯರ ಸಹಿತ ಉಳಿದವರು ರಾತ್ರಿಯಿಡೀ ಮಳೆ, ಚಳಿಯ ಹೊಡೆತಕ್ಕೆ ಸಿಲುಕಿ ನಿತ್ರಾಣವಾಗಿದ್ದು ರಕ್ಷಣಾ ನೌಕೆಯ ಮೂಲಕ 59 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ನೀರಿನಲ್ಲಿ ಮುಳುಗಿರುವ ಸಾಧ್ಯತೆಯಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮ್ಯಾನ್ಮಾರ್ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಸುಮಾರು 7,40,000 ರೊಹಿಂಗ್ಯಾಗಳು ಬಾಂಗ್ಲಾದೇಶದ ತಾತ್ಕಾಲಿಕ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ಕಿಕ್ಕಿರಿದ ಶಿಬಿರಗಳಿಂದ ನೆರೆಯ ದೇಶಗಳಿಗೆ ಪಲಾಯನ ಮಾಡಲು ಸಾವಿರಾರು ರೊಹಿಂಗ್ಯಾಗಳು ಪ್ರಯತ್ನಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಇಂಡೊನೇಶ್ಯಕ್ಕೆ ಆಗಮಿಸುವ ರೊಹಿಂಗ್ಯಾ ನಿರಾಶ್ರಿತರ ಸಂಖ್ಯೆ ಹೆಚ್ಚಿದೆ.