ದೋಣಿ ಮುಳುಗಿ ಕನಿಷ್ಟ 6 ವಲಸಿಗರ ಮೃತ್ಯು, 50 ಮಂದಿಯ ರಕ್ಷಣೆ; ಫ್ರಾನ್ಸ್ ಬಳಿ ದುರಂತ
Photo:theprint.in
ಪ್ಯಾರಿಸ್: ಫ್ರಾನ್ಸ್ ಸಮುದ್ರಮಾರ್ಗದ ಮೂಲಕ ಸಂಚರಿಸುತ್ತಿದ್ದ ವಲಸಿಗರ ದೋಣಿ ಮುಳುಗಿ ಕನಿಷ್ಟ 6 ಮಂದಿ ಮೃತಪಟ್ಟಿದ್ದು 50ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಮೇಯರ್ ಫ್ರಾಂಕ್ ಡೆರ್ಸಿನ್ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಶನಿವಾರ ಬೆಳಿಗ್ಗೆ ಒಂದೇ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ದೋಣಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ದುರಂತ ಸಂಭವಿಸಿದೆ. ಸ್ಯಾಂಗೆಟ್ ನಗರದ ಬಳಿ ಕಡಲ ತೀರದಲ್ಲಿ ಕನಿಷ್ಟ 6 ಮೃತದೇಹಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ. ಫ್ರಾನ್ಸ್ ಮತ್ತು ಬ್ರಿಟನ್ ನಡುವಿನ ಈ ಸಮುದ್ರ ಮಾರ್ಗವು ವಿಶ್ವದ ಅತ್ಯಂತ ಕಾರ್ಯನಿರತ ಸಮುದ್ರ ಮಾರ್ಗಗಳಲ್ಲಿ ಒಂದಾಗಿದ್ದು ಇಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸಣ್ಣ ದೋಣಿಗಳಿಗೆ ಅಪಾಯಕಾರಿ ಮಾರ್ಗವಾಗಿದೆ.
ಸಣ್ಣ ದೋಣಿಯಲ್ಲಿ ಸಾಮಥ್ರ್ಯಕ್ಕಿಂತ ಮಿಗಿಲಾದ ವಲಸಿಗರಿದ್ದರು. ಆದ್ದರಿಂದ ದೋಣಿಯಲ್ಲಿ ನೀರು ತುಂಬಿ ಮುಳುಗಿದೆ. ತಕ್ಷಣ ರಕ್ಷಣಾ ತಂಡದವರು ಒಬ್ಬ ಮಹಿಳೆ ಸಹಿತ 54 ಮಂದಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೌಕಾಯಾನ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಹರ್ವ್ ಬೆರ್ವಿಲೆ ದುರಂತ ನಡೆದ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿದ್ದಾರೆ ಎಂದು ಫ್ರಾನ್ಸ್ ಪ್ರಧಾನಿ ಎಲಿಝಬೆತ್ ಬೋರ್ನೆ ಹೇಳಿದ್ದಾರೆ. ರಕ್ಷಣಾ ತಂಡ, ಆಂಬ್ಯುಲೆನ್ಸ್ ಸಿಬಂದಿಯ ಸಹಿತ ಸಂರಕ್ಷಣ ನೌಕೆಯನ್ನು ದುರಂತದ ಸ್ಥಳಕ್ಕೆ ಬ್ರಿಟನ್ ರವಾನಿಸಿದೆ. ಇದೇ ಸಮುದ್ರ ಮಾರ್ಗದಲ್ಲಿ ಶನಿವಾರವೇ ನಡೆದ ಮತ್ತೊಂದು ಪ್ರತ್ಯೇಕ ದೋಣಿ ದುರಂತದಲ್ಲಿ ನೀರು ಪಾಲಾಗಿದ್ದವರನ್ನು ಬ್ರಿಟನ್ನ ರಕ್ಷಣಾ ಪಡೆ ರಕ್ಷಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
2018ರ ಬಳಿಕ ಈ ಸಮುದ್ರ ಮಾರ್ಗದ ಮೂಲಕ ಸಂಚರಿಸುವ ವಲಸಿಗರ ಸಂಖ್ಯೆ 1 ಲಕ್ಷ ದಾಟಿದೆ. ಈ ವರ್ಷದ ಜುಲೈ ತಿಂಗಳವರೆಗೆ ಸುಮಾರು 16,000 ವಲಸಿಗರು ಈ ಸಮುದ್ರ ಮಾರ್ಗ ಬಳಸಿದ್ದಾರೆ ಎಂದು ಬ್ರಿಟನ್ ಸರಕಾರ ಮಾಹಿತಿ ನೀಡಿದೆ.