ನಮ್ಮ ಯುದ್ಧ ಹಮಾಸ್ ಜತೆ; ಫೆಲೆಸ್ತೀನಿಯರ ಜತೆಗಲ್ಲ ಇಸ್ರೇಲ್ ಪ್ರಧಾನಿ ನೆತನ್ಯಾಹು
ಬೆಂಜಮಿನ್ ನೆತನ್ಯಾಹು | PHOTO: PTI
ಟೆಲ್ ಅವೀವ್: ಇಸ್ರೇಲ್ ನ ಯುದ್ಧವು ಹಮಾಸ್ ವಿರುದ್ಧವಾಗಿದೆ, ಫೆಲೆಸ್ತೀನೀಯನ್ ಜನರ ವಿರುದ್ಧವಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲಿ ಕುಟುಂಬಗಳು ಶೀಘ್ರವಾಗಿ ಸಾಮಾನ್ಯ ಸ್ಥಿತಿಗೆ ಹಿಂದಿರುಗುವುದು ಮತ್ತು ಹಮಾಸ್ ವಿರುದ್ಧ ಕ್ರಮ ಕೈಗೊಳ್ಳುವ ಮಹತ್ವವನ್ನು ಒತ್ತಿ ಹೇಳಿದ ಇಸ್ರೇಲ್ ಪ್ರಧಾನಿ ಕಚೇರಿಯ ವಕ್ತಾರೆ ತಾಲ್ ಹೆನ್ರಿಚ್ ‘ನಮ್ಮ ಪ್ರಜೆಗಳ ದೃಢತೆಯೇ ನಮ್ಮ ಶಕ್ತಿಯಾಗಿದೆ’ ಎಂದಿದ್ದಾರೆ.
ವರ್ಚುವಲ್ ವೇದಿಕೆಯ ಮೂಲಕ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ಹಮಾಸ್ ಸಿದ್ಧಪಡಿಸಿದ್ದ ‘ಅಪಹರಣಕಾರರ ಮಾರ್ಗದರ್ಶಿ’ಯನ್ನು ಇಸ್ರೇಲ್ ಪಡೆ ಪತ್ತೆಹಚ್ಚಿದೆ. ಅಮಾಯಕ ನಾಗರಿಕರನ್ನು ಯಾವ ರೀತಿ ಅಪಹರಿಸಬೇಕು ಮತ್ತು ಅಪಹರಿಸಿದ ನಾಗರಿಕರನ್ನು ಯಾವ ರೀತಿ ಚಿತ್ರಹಿಂಸೆಗೆ ಗುರಿಪಡಿಸಬೇಕು ಎಂಬ ಮಾಹಿತಿ ಇದರಲ್ಲಿದ್ದು ಹಮಾಸ್ ನ ಭೀಕರ ಕೃತ್ಯಕ್ಕೆ ಇದು ಪುರಾವೆಯಾಗಿದೆ’ ಎಂದರು.
ಗಾಝಾ ಪಟ್ಟಿಯಲ್ಲಿ ಹಮಾಸ್ ಪಡೆ ಅಮಾಯಕ ಫೆಲೆಸ್ತೀನಿಯನ್ ಪ್ರಜೆಗಳನ್ನು ಮಾನವ ಗುರಾಣಿಯಂತೆ ಬಳಸುತ್ತಿದೆ. ಗಾಝಾದಲ್ಲಿನ ಫೆಲೆಸ್ತೀನೀಯರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳದಂತೆ ತಡೆಯುತ್ತಿದೆ. ಗಾಝಾದಲ್ಲಿನ ಆರೋಗ್ಯ ಇಲಾಖೆಯ ತಂಡವೊಂದು ಗಾಝಾ ಪ್ರದೇಶದಲ್ಲಿನ ಇಂಧನ ಮತ್ತು ಔಷಧ ಸಾಮಾಗ್ರಿಗಳನ್ನು ಖಾಲಿ ಮಾಡುತ್ತಿರುವುದಾಗಿ ವಿಶ್ವಸಂಸ್ಥೆಯ ಪರಿಹಾರ ಏಜೆನ್ಸಿ ವರದಿ ಮಾಡಿದೆ’ ಎಂದ ಹೆನ್ರಿಚ್ ‘ಗಾಝಾದ ದಕ್ಷಿಣದ ಸುರಕ್ಷಿತ ಪ್ರದೇಶಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲು ಅಂತರಾಷ್ಟ್ರೀಯ ಸಮುದಾಯ ಫೆಲೆಸ್ತೀನೀಯರನ್ನು ಪ್ರೋತ್ಸಾಹಿಸುವ ಇಂತಹ ಕೃತ್ಯಗಳು ಜೀವಗಳನ್ನು ಉಳಿಸಬಹುದು. ಇಸ್ರೇಲ್ ಕೂಡಾ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಉತ್ತರ ಭಾಗದಿಂದ ತನ್ನ 80,000ಕ್ಕೂ ಅಧಿಕ ನಾಗರಿಕರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ’ ಎಂದು ಹೇಳಿದ್ದಾರೆ.