ಗಾಝಾದಲ್ಲಿ ವಿಶ್ವಸಂಸ್ಥೆ ಏಜೆನ್ಸಿ ಚಟುವಟಿಕೆ ಸ್ಥಗಿತಕ್ಕೆ ಪ್ರಯತ್ನ: ಇಸ್ರೇಲ್
Photo:X/@ndtv
ಜೆರುಸಲೇಂ: ಯುದ್ಧದ ಬಳಿಕ ಗಾಝಾದಲ್ಲಿ `ಫೆಲೆಸ್ತೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಪರಿಹಾರ ಮತ್ತು ನೆರವು ಏಜೆನ್ಸಿ(ಯುಎನ್ಆರ್ಡಬ್ಲ್ಯೂಎ)ಯ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಬಯಸುವುದಾಗಿ ಇಸ್ರೇಲ್ನ ಸಚಿವರು ಶನಿವಾರ ಹೇಳಿದ್ದಾರೆ.
ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಯುಎನ್ಆರ್ಡಬ್ಲ್ಯೂಎದ ಹಲವು ಸಿಬ್ಬಂದಿಗಳು ಸಕ್ರಿಯ ಪಾತ್ರ ವಹಿಸಿದ್ದರು ಎಂದು ಇಸ್ರೇಲ್ ಆರೋಪಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. `ಯುದ್ಧ ಮುಗಿದ ಬಳಿಕ ಯುಎನ್ಆರ್ಡಬ್ಲ್ಯೂಎ ಗಾಝಾದಲ್ಲಿ ಯಾವುದೇ ಪಾತ್ರ ನಿರ್ವಹಿಸದು ಎಂಬುದನ್ನು ಖಾತರಿಪಡಿಸಲು ಇಸ್ರೇಲ್ ಉದ್ದೇಶಿಸಿದೆ. ವಿಶ್ವಸಂಸ್ಥೆಯ ಈ ಏಜೆನ್ಸಿಗೆ ಆರ್ಥಿಕ ನೆರವು ಒದಗಿಸುತ್ತಿರುವ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತಿತರ ಪ್ರಮುಖ ದೇಣಿಗೆದಾರರ ಬೆಂಬಲ ಕ್ರೋಢೀಕರಿಸಲು ಪ್ರಯತ್ನಿಸಲಾಗುವುದು' ಎಂದು ಇಸ್ರೇಲ್ ವಿದೇಶಾಂಗ ಸಚಿವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಮಾಸ್ `ವಿಶ್ವಸಂಸ್ಥೆ ಏಜೆನ್ಸಿಯ ವಿರುದ್ಧದ ಇಸ್ರೇಲ್ ಬೆದರಿಕೆ ಖಂಡನೀಯ. ತನ್ನ ವಿರುದ್ಧದ ಆರೋಪಗಳಿಂದ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಇಸ್ರೇಲ್ ನಡೆಸುತ್ತಿರುವ ಈ ಬೆದರಿಕೆ ಮತ್ತು ಬ್ಲ್ಯಾಕ್ಮೇಲ್ಗೆ ವಿಶ್ವಸಂಸ್ಥೆ ಹಾಗೂ ಇತರ ಅಂತರಾಷ್ಟ್ರೀಯ ಸಂಸ್ಥೆಗಳು ಬಗ್ಗಬಾರದು' ಎಂದು ಆಗ್ರಹಿಸಿದೆ.
ಇಸ್ರೇಲ್ ಆರೋಪದ ಹಿನ್ನೆಲೆಯಲ್ಲಿ ಯುಎನ್ಆರ್ಡಬ್ಲ್ಯೂಎ ಚಟುವಟಿಕೆಯ ಸಮಗ್ರ, ತುರ್ತು ಮತ್ತು ಸ್ವತಂತ್ರ ಪರಿಶೀಲನೆಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ವಾಗ್ದಾನ ಮಾಡಿದ್ದಾರೆ ಎಂದು ಅವರ ವಕ್ತಾರರು ಹೇಳಿದ್ದಾರೆ.
ವಿಶ್ವಸಂಸ್ಥೆ ಏಜೆನ್ಸಿಗೆ ಹಣಕಾಸಿನ ನೆರವನ್ನು ಸ್ಥಗಿತಗೊಳಿಸುವುದಾಗಿ ಕೆನಡಾ ಮತ್ತು ಆಸ್ಟ್ರೇಲಿಯಾವೂ ಘೋಷಿಸಿದೆ.