ಆಸ್ಟ್ರೇಲಿಯ: ಭಾರತೀಯ ಮೂಲದ ಬಾಲಕನಿಗೆ ದುಷ್ಕರ್ಮಿಗಳಿಂದ ಇರಿತ
ಮೆಲ್ಬೋರ್ನ್: ಭಾರತೀಯ ಮೂಲದ 16 ವರ್ಷದ ಬಾಲಕನೊಬ್ಬನನ್ನು ಆತ ಹುಟ್ಟುಹಬ್ಬದಂದು ದುಷ್ಕರ್ಮಿಗಳು ಗುಂಪೊಂದು ಮನಬಂದಂತೆ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಆಸ್ಟ್ರೇಲಿಯದ ಮೆಲ್ಬೋರ್ನ್ ನಗರದಲ್ಲಿ ರವಿವಾರ ವರದಿಯಾಗಿದೆ. ದುಷ್ಕರ್ಮಿಗಳು ಬಾಲಕನ ಇಬ್ಬರು ಗೆಳೆಯರ ಮೇಲೂ ದಾಳಿ ನಡೆಸಿದ್ದು ಅವರು ಕೂಡಾ ಗಾಯಗೊಂಡಿದ್ದಾರೆ. ನಗರದ ಟಾರ್ನೆಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಿಯಾನ್ ಸಿಂಗ್ ಹಾಗೂ ಆತನ ಇಬ್ಬರು ಸ್ನೇಹಿತರು ಬಾಸ್ಕೆಟ್ಬಾಲ್ ಆಡುತ್ತಿದ್ದಾಗ ಮಾರಕಾಸ್ತ್ರಗಳನ್ನು ಹಿಡಿದಿದ್ದ ಸುಮಾರು 7 ಮಂದಿಯ ಗುಂಪೊಂದು, ಮೊಬೈಲ್ ಫೋನ್ ನೀಡುವಂತೆ ರಿಯಾನ್ಗೆ ಬೆದರಿಕೆ ಹಾಕಿತ್ತು. ಅಲ್ಲದೆ ರಿಯಾನ್ ಬಳಿಯಿದ್ದ ನೈಕ್ ಏರ್ ಸ್ಪೀಕರ್ ಕೂಡಾ ನೀಡುವಂತೆ ಬಲವಂತಪಡಿಸಿದ್ದು, ರಿಯಾನ್ ಪ್ರತಿಭಟಿಸಿದಾಗ ದುಷ್ಕರ್ಮಿಗಳು ಆತನಿಗೆ ಚೂರಿಯಿಂದ ಇರಿದಿದ್ದಾರೆ.
ಕ್ರಿಕೆಟ್ ಆಟಗಾರನಾಗಬೇಕೆಂಬ ಆಕಾಂಕ್ಷೆ ಹೊಂದಿದ್ದ ರಿಯಾನ್ ನ ಎದೆ, ಅಂಗೈ,ಕೈ ಹಾಗೂ ಬೆನ್ನಿಗೆ ದುಷ್ಕರ್ಮಿಗಳು ಹಲವಾರು ಸಲ ಇರಿದಿದ್ದಾರೆ. ಆತನ ತಲೆಯ ಹಿಂದಿನ ಭಾಗಕ್ಕೂ ಬಲವಾಗಿ ಹೊಡೆದ್ದಾರೆ ಎಂದು ವರದಿ ತಿಳಿಸಿದೆ. ಆತನ ಓರ್ವ ಗೆಳೆಯನಿಗೂ ಇರಿತದ ಗಾಯಗಳಾಗಿವೆಯೆಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಬಳಿಕ ದುಷ್ಕರ್ಮಿಗಳು ತಾವು ಬಂದಿದ್ದ ಕಪ್ಪುಬಣ್ಣದ ಕಾರಿನಲ್ಲಿ ಪರಾರಿಯಾಗಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿಯಾದ ರಿಯಾನ್ನ ಹುಟ್ಟುಹಬ್ಬದ ದಿನವೂ ಅಂದೇ ಆಗಿತ್ತು. ಆ ಪ್ರಯುಕ್ತ ರಾತ್ರಿ ಮನೆಯಲ್ಲಿ ನಡೆಯಲಿದ್ದ ಔತಣಕೂಟಲ್ಲಿ ಪಾಲ್ಗೊಳ್ಳುವ ಮುನ್ನ ಗೆಳೆಯರೊಡನೆ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿರುವ ರಿಯಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಎಡಕೈಯಲ್ಲಿನ ಬೆರಳುಗಳನ್ನು ಉಳಿಸಲು ವೈದ್ಯರು ಶಸ್ತ್ರಕ್ರಿಯೆ ನಡೆಸಿದ್ದಾರೆ. ಆತನ ಇಬ್ಬರು ಸ್ನೇಹಿತರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.