ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ : ಮಸೂದೆಗೆ ಆಸ್ಟ್ರೇಲಿಯಾ ಅಂಗೀಕಾರ
ಪರ್ತ್ : 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಕಾನೂನಿನತ್ತ ಆಸ್ಟ್ರೇಲಿಯಾ ಒಂದು ಹೆಜ್ಜೆ ಮುಂದಿರಿಸಿದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಸಂಸತ್‍ನ ಮೇಲ್ಮನೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಬುಧವಾರ ಅಂಗೀಕರಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಪ್ರಧಾನಿ ಅಂಥೋನಿ ಅಲ್ಬಾನೀಸ್ ಅವರ ಲೇಬರ್ ಪಕ್ಷದ ಸರಕಾರದ ಬೆಂಬಲ ಪಡೆದಿರುವ ಮಸೂದೆಯ ಪರ ಮೇಲ್ಮನೆಯಲ್ಲಿ 102 ಸದಸ್ಯರು ಮತ ಚಲಾಯಿಸಿದರೆ 13 ಸದಸ್ಯರು ವಿರೋಧಿಸಿದರು. ಗೂಗಲ್ ಮತ್ತು ಮೇಟಾದಂತಹ ಅಗ್ರಗಣ್ಯ ತಂತ್ರಜ್ಞಾನ ಸಂಸ್ಥೆಗಳ ತೀವ್ರ ವಿರೋಧದ ನಡುವೆಯೂ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ. ಇದೀಗ ಮಸೂದೆಯನ್ನು ಸೆನೆಟ್‍ನಲ್ಲಿ ಮಂಡಿಸಲಾಗುತ್ತದೆ.
ದೇಶದಲ್ಲಿ ಸೈಬರ್‍ಬುಲ್ಲಿಂಗ್(ಸೈಬರ್ ಬೆದರಿಕೆ) ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಮಕ್ಕಳ ಪೋಷಕರು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕಾನೂನನ್ನು ಜಾರಿಗೆ ತರಲು ಸರಕಾರ ಉದ್ದೇಶಿಸಿದೆ. ಆದರೆ ಇದಕ್ಕೆ ಕೆಲವರ ವಿರೋಧವೂ ವ್ಯಕ್ತವಾಗಿದೆ.
ಮಸೂದೆಯು ಸೆನೆಟ್ ಅಂಗೀಕಾರ ಪಡೆದು ಕಾನೂನಿನ ರೂಪ ಪಡೆದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳು `ವಯಸ್ಸು ಪರಿಶೀಲಿಸುವ ಕ್ರಮ'ಗಳನ್ನು ಜಾರಿಗೆ ತರಬೇಕಾಗುತ್ತದೆ.