ಆಸ್ಟ್ರೇಲಿಯಾ: ಚಂಡಮಾರುತದ ಅಬ್ಬರ, ಓರ್ವ ಮೃತ್ಯು; ವ್ಯಾಪಕ ಹಾನಿ
Photo:NDTV
ಸಿಡ್ನಿ: ಪೂರ್ವ ಆಸ್ಟ್ರೇಲಿಯಾದಲ್ಲಿ ಸುಂಟರಗಾಳಿ ಹಾಗೂ ಭಾರೀ ಮಳೆಯ ಸಹಿತ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಹಲವೆಡೆ ಮರಗಳು ಉರುಳಿಬಿದ್ದು ವ್ಯಾಪಕ ಹಾನಿಯಾಗಿದೆ. 1,74,000ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ವಿಕ್ಟೋರಿಯಾ ಪ್ರಾಂತದ ಬಹುತೇಕ ಪ್ರದೇಶಗಳಲ್ಲಿ ಗಂಟೆಗೆ ಸುಮಾರು 150 ಕಿ.ಮೀ ವೇಗದ ಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೆಲ್ಬೋರ್ನ್ನ ಆಗ್ನೇಯದ ದರ್ಲಿಮುರ್ಲಾ ನಗರದಲ್ಲಿನ ನಿವಾಸಿ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮರವೊಂದು ಆತನ ಮೇಲೆಯೇ ಕುಸಿದುಬಿದ್ದು ಮೃತಪಟ್ಟಿದ್ದಾನೆ ಎಂದು ವಿಕ್ಟೋರಿಯಾ ಪೊಲೀಸರು ಹೇಳಿದ್ದಾರೆ. ಟ್ರಾನ್ಸ್ಮಿಷನ್ ಟವರ್ ಕುಸಿದುಬಿದ್ದು ವಿಕ್ಟೋರಿಯಾದ ಅತೀ ದೊಡ್ಡ ವಿದ್ಯುತ್ ಸ್ಥಾವರ ಲಾಯ್ಯಾಂಗ್ ಸ್ಥಗಿತಗೊಂಡಿದೆ. ವಿಕ್ಟೋರಿಯಾ ರಾಜ್ಯದ ಇತಿಹಾಸದಲ್ಲಿಯೇ ಇದು ಅತೀ ದೊಡ್ಡ ವಿದ್ಯುತ್ ಬಿಕ್ಕಟ್ಟಾಗಿದೆ ಎಂದು ವಿಕ್ಟೋರಿಯಾದ ಇಂಧನ ಸಚಿವ ಲಿಲಿ ಡಿ' ಅಂಬ್ರೋಸಿಯೊ ಮಾಹಿತಿ ನೀಡಿದ್ದಾರೆ.
ಮೆಲ್ಬೋರ್ನ್ನ ಪಶ್ಚಿಮದಲ್ಲಿರುವ ಗ್ರಾಂಪಿಯನ್ಸ್ ಪ್ರದೇಶದಲ್ಲಿ ಬೀಸಿದ ಬಿರುಗಾಳಿಯಿಂದ ಕಾಡ್ಗಿಚ್ಚು ಹಲವು ಮನೆಗಳಿಗೆ ಹರಡಿದೆ. ಸುಮಾರು 1,74,000 ಮನೆಗಳಿಗೆ ಹಾಗೂ ವ್ಯಾಪಾರ ಸಂಸ್ಥೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.