ಆಸ್ಟ್ರೇಲಿಯ: ಏಳು ಅಂತಸ್ತಿನ ಕಟ್ಟಡದಿಂದ ಬಿದ್ದು ಬದುಕುಳಿದ ಯುವತಿ, ಸ್ಥಿತಿ ಗಂಭೀರ
Photo: NDTV
ಸಿಡ್ನಿ: ಆಸ್ಟ್ರೇಲಿಯದ ಮೆಲ್ಬೋರ್ನ್ ನಲ್ಲಿ ಏಳು ಅಂತಸ್ತಿನ ಕಟ್ಟಡದಿಂದ ಕೆಳಗೆ ಬಿದ್ದ 20 ವರ್ಷದ ಯುವತಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾಳೆ. ಆದರೆ, ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು News.com.au ವರದಿ ಮಾಡಿದೆ.
ಬದುಕುಳಿದ ಯುವತಿ ಟೊಮಿನಿ ರೀಡ್ ಮೆಲ್ಬೋರ್ನ್ನ ಆಲ್ಫ್ರೆಡ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮುಂಜಾನೆ 1.30ಕ್ಕೆ ನಡೆದ ಈ ಘಟನೆಯ ಬಗ್ಗೆ ರೀಡ್ ಅವರ ಪೋಷಕರಿಗೆ ಮಾಹಿತಿ ಲಭಿಸಿತು. ತಮ್ಮ ಮಗಳು ಸುಮಾರು 21 ಮೀಟರ್ಗಳಷ್ಟು ಎತ್ತರದಿಂದ ನೆಲಕ್ಕೆ ಬಿದ್ದಿದ್ದಾಳೆ ಎಂದು ಪೋಷಕರಿಗೆ ತಿಳಿಸಲಾಗಿದೆ ಎಂದು ಮಾಧ್ಯಮವು ವರದಿ ಮಾಡಿದೆ.
ಅಂದಿನಿಂದ, ಯುವತಿ ಆಸ್ಪತ್ರೆಯಲ್ಲಿ ಹಲವಾರು ಜೀವ ಉಳಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ಆಕೆಯ ಬದುಕುಳಿದಿರುವುದು "ಪವಾಡ" ಎಂದು ಆಸ್ಪತ್ರೆಯ ಸಿಬ್ಬಂದಿ ವಿವರಿಸುತ್ತಿದ್ದಾರೆ ಎಂದು ಆಕೆಯ ಕುಟುಂಬ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಆದಾಗ್ಯೂ, ಆಕೆಯ ಚೇತರಿಕೆಯ ಹಾದಿಯು ದೀರ್ಘ ಮತ್ತು ಸವಾಲಿನದಾಗಿರುತ್ತದೆ.
ರೀಡ್ ಅವರ ತಂದೆ ಬ್ರಾಡ್ ಅವರು ಅಪಘಾತದ ಸುದ್ದಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
"ಹಲವು ವಾರಗಳಿಂದ ನಡೆಯುತ್ತಿರುವ ಜೀವ ಉಳಿಸುವ ಶಸ್ತ್ರಚಿಕಿತ್ಸೆಗಳ ನಂತರ ಅವಳು ಅದ್ಭುತವಾಗಿ ಅಡೆತಡೆ ದಾಟಿದ್ದಾಳೆ. ಇನ್ನೂ ನಮ್ಮೊಂದಿಗೆ ಇದ್ದಾಳೆ" ಎಂದು ಅವರು ಶನಿವಾರ ಬರೆದಿದ್ದಾರೆ.
"ಅವಳ ಮುಂದೆ ದೊಡ್ಡ ಹೋರಾಟ ಇದೆ. ಆದರೆ ನನಗೆ ತಿಳಿದಿರುವ ಅತ್ಯಂತ ಬಲಿಷ್ಠ ವ್ಯಕ್ತಿಗಳಲ್ಲಿ ಆಕೆ ಒಬ್ಬಳಾಗಿದ್ದಾಳೆ ಮತ್ತು ಈ ಹೋರಾಟಕ್ಕೆ ಆಕೆ ಸಿದ್ಧಳಾಗಿದ್ದಾಳೆ! ಟಿ-ಬಾಂಬ್ ಎಂದಿಗಿಂತಲೂ ಬಲವಾಗಿ ಹೊರಬರುತ್ತದೆ!" ಎಂದು ಬ್ರಾಡ್ ಬರೆದಿದ್ದಾರೆ.