ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲು ಆಸ್ಟ್ರೇಲಿಯಾ ನಿರ್ಧಾರ
PC : freepik
ಸಿಡ್ನಿ : ಮುಂದಿನ ವರ್ಷದಿಂದ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯನ್ನು 2,70,000ಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಆಸ್ಟ್ರೇಲಿಯಾ ಸರಕಾರ ಘೋಷಿಸಿದೆ.
2025ರಲ್ಲಿ ವಿಶ್ವವಿದ್ಯಾನಿಲಯ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ತರಬೇತಿಗಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆಯನ್ನು 2,70,000ಕ್ಕೆ ಮಿತಿಗೊಳಿಸಲಾಗಿದೆ. ಇದರರ್ಥ ಕೆಲವು ವಿವಿಗಳು ಈ ವರ್ಷಕ್ಕಿಂತ ಮುಂದಿನ ವರ್ಷ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಲಿದ್ದರೆ ಇನ್ನು ಕೆಲವು ವಿವಿಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಇರಲಿದ್ದಾರೆ . ಈ ಬದಲಾವಣೆಯಿಂದಾಗಿ ಕೋವಿಡ್ -19 ಸೋಂಕಿಗೂ ಮುನ್ನ ಇದ್ದಷ್ಟೇ ಪ್ರಮಾಣದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ ಇರುತ್ತಾರೆ ಎಂದು ಶಿಕ್ಷಣ ಸಚಿವ ಜೇಸನ್ ಕ್ಲ್ಯಾರ್ ಹೇಳಿದ್ದಾರೆ.
ಸರಕಾರದ ಈ ಯೋಜನೆಗೆ ಕಾನೂನಿನ ಅನುಮೋದನೆ ದೊರಕಬೇಕಿದೆ. 2023ರಲ್ಲಿ ಆಸ್ಟ್ರೇಲಿಯಾದ ವಿವಿ ಮತ್ತು ವೃತ್ತಿಪರ ಶಿಕ್ಷಣ ಕೇಂದ್ರಗಳ ಆರ್ಥಿಕತೆಗೆ ವಿದೇಶಿ ವಿದ್ಯಾರ್ಥಿಗಳಿಂದ 28 ಶತಕೋಟಿ ಡಾಲರ್ ಗೂ ಅಧಿಕ ಕೊಡುಗೆ ಸಂದಿದೆ. ಗಣಿಗಾರಿಕೆಯ ಬಳಿಕ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾದ ಎರಡನೇ ಅತೀ ದೊಡ್ಡ ಉದ್ಯಮವಾಗಿದ್ದು ಕಳೆದ ವರ್ಷ ಆಸ್ಟ್ರೇಲಿಯಾದ ಆರ್ಥಿಕತೆಯ 50% ಕ್ಕಿಂತ ಅಧಿಕ ಬೆಳವಣಿಗೆಯನ್ನು ಹೊಂದಿದೆ. ಸಾಗರೋತ್ತರ ವಿದ್ಯಾರ್ಥಿಗಳ ಪ್ರತೀ ಡಾಲರ್ ಅನ್ನು ಆಸ್ಟ್ರೇಲಿಯಾದ ವಿವಿಗಳಿಗೆ ಮರು ಹೂಡಿಕೆ ಮಾಡಲಾಗುತ್ತದೆ. ಈ ಉದ್ದಿಮೆ ಆಸ್ಟ್ರೇಲಿಯಾಕ್ಕೆ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನಿಸ್ ಹೇಳಿದ್ದಾರೆ.