ಗಾಝಾ ಜನರು ಎರಡು ತುಂಡು ಬ್ರೆಡ್ ತಿಂದು ದಿನದೂಡುತ್ತಿದ್ದಾರೆ, ನೀರಿಗಾಗಿ ಹಾಹಾಕಾರವಿದೆ: ವಿಶ್ವ ಸಂಸ್ಥೆಯ ಅಧಿಕಾರಿ
Photo: PTI
ಹೊಸದಿಲ್ಲಿ: ಇಸ್ರೇಲ್ನಿಂದ ಸತತ ದಾಳಿಗೊಳಗಾಗಿರುವ ಗಾಝಾದಲ್ಲಿ ಜನರು ಈಗ ಅಲ್ಲಿ ವಿಶ್ವಸಂಸ್ಥೆ ಶೇಖರಿಸಿಟ್ಟಿರುವ ಅರೆಬಿಕ್ ಬ್ರೆಡ್ನ ಎರಡು ತುಂಡುಗಳನ್ನು ತಿಂದು ದಿನ ದೂಡುತ್ತಿದ್ದಾರೆ ಹಾಗೂ ಎಲ್ಲೆಡೆ ಈಗ ಅಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದೆ ಎಂದು ಫೆಲೆಸ್ತೀನಿ ನಿರಾಶ್ರಿತರಿಗಾಗಿರುವ ವಿಶ್ವ ಸಂಸ್ಥೆಯ ಏಜನ್ಸಿಯ ಗಾಝಾ ನಿರ್ದೇಶಕರಾದ ಥಾಮಸ್ ವೈಟ್ ಹೇಳಿದ್ದಾರೆ.
ಕಳೆದ ಕೆಲ ವಾರಗಳಲ್ಲಿ ಗಾಝಾದ ಉದ್ದಗಲಕ್ಕೂ ತಾವು ತೆರಳಿರುವುದಾಗಿ ತಿಳಿಸಿದ ಅವರು ಎಲ್ಲೆಡೆ ಸಾವು ಮತ್ತು ವಿನಾಶ ಕಾಣಿಸುತ್ತಿದೆ. ಅಲ್ಲಿ ಸುರಕ್ಷಿತ ಸ್ಥಳವೆಂಬುದಿಲ್ಲ, ಜನರು ತಮ್ಮ ಜೀವಗಳಿಗೆ, ಭವಿಷ್ಯದ ಕುರಿತು ಹಾಗೂ ತಮ್ಮ ಕುಟುಂಬಗಳನ್ನು ಸಲಹುವ ಬಗೆ ಹೇಗೆ ಎಂಬ ಕುರಿತು ಚಿಂತಿತರಾಗಿದ್ದಾರೆ ಎಂದು ಅವರು ಹೇಳಿದರು.
ವಿಶ್ವ ಸಂಸ್ಥೆಯ ಫೆಲೆಸ್ತೀನಿ ನಿರಾಶ್ರಿತರ ಏಜನ್ಸಿಯು ಗಾಝಾದಾದ್ಯಂತ 89 ಬೇಕರಿಗಳಿಗೆ ಬೆಂಬಲ ನೀಡುತ್ತಿದ್ದು17 ಲಕ್ಷ ಜನರಿಗೆ ಬ್ರೆಡ್ ದೊರೆಯುವಂತೆ ಮಾಡುವ ಉದ್ದೇಶ ಅದಕ್ಕಿದೆ. ಆದರೆ ಈಗ ಜನರು ನೀರಿಗಾಗಿ ಹುಡುಕುವ ಸ್ಥಿತಿ ಬಂದಿದೆ ಎಂದು ಅವರು ಹೇಳಿದರು.
ಒಳ್ಳೆಯ ನೀರು ಸಿಗದೇ ಇರುವಾಗ ಜನರು ಉಪ್ಪಿನಂಶವಿರುವ ಅಂತರ್ಜಲವನ್ನು ಅವಲಂಬಿಸುವಂತಾಗಿದೆ ಎಂದು ಅವರು ಹೇಳಿದರು.