ಪತನಗೊಂಡ ವಿಮಾನಕ್ಕೆ ರಶ್ಯದ ನೆಲದಿಂದ ಶೂಟ್ ಮಾಡಲಾಗಿದೆ: ಅಝರ್ಬೈಜಾನ್ ಅಧ್ಯಕ್ಷರ ಹೇಳಿಕೆ
PC : PTI
ಬಾಕು : ಕಝಕಿಸ್ತಾನದಲ್ಲಿ ಪತನಗೊಂಡ ಪ್ರಯಾಣಿಕರ ವಿಮಾನಕ್ಕೆ ರಶ್ಯದ ನೆಲದಿಂದ ಶೂಟ್ ಮಾಡಲಾಗಿದೆ. ಆದರೆ ಇದು ಆಕಸ್ಮಿಕವಾಗಿತ್ತು ಎಂದು ಅಝರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ರವಿವಾರ ಹೇಳಿದ್ದಾರೆ.
ಅಝರ್ಬೈಜಾನ್ ಏರ್ಲೈನ್ಸ್ ವಿಮಾನ ದುರಂತದ ಸತ್ಯವನ್ನು ಮುಚ್ಚಿಹಾಕಲು ಮತ್ತು ದುರಂತದ ಬಗ್ಗೆ ಸುಳ್ಳು ನಿರೂಪಣೆಗೆ ರಶ್ಯದಲ್ಲಿನ `ಕೆಲವು ಕೂಟಗಳು' ಪ್ರಯತ್ನಿಸುತ್ತಿವೆ ಎಂದು ಅವರು ವಿಷಾದಿಸಿದ್ದಾರೆ. ವಿಮಾನ ಪತನಗೊಂಡ ಪ್ರದೇಶದಲ್ಲಿ ಉಕ್ರೇನ್ ಪಡೆಗಳ ಡ್ರೋನ್ ದಾಳಿಯ ವಿರುದ್ಧ ರಶ್ಯಾದ ವಾಯುಪಡೆ ಕಾರ್ಯಾಚರಣೆಯಲ್ಲಿ ನಿರತವಾಗಿತ್ತು. ಕೆಲವು ರೀತಿಯ ಇಲೆಕ್ಟ್ರಾನಿಕ್ ಜಾಮಿಂಗ್ಗೆ ಒಳಗಾದ ವಿಮಾನವು ರಶ್ಯದ ಗ್ರೋಝ್ನಿ ನಗರವನ್ನು ಸಮೀಪಿಸುತ್ತಿದ್ದಂತೆಯೇ ದಾಳಿಗೆ ಗುರಿಯಾಯಿತು ಎಂದವರು ಹೇಳಿದ್ದಾರೆ.
ಹಕ್ಕಿ ಬಡಿದು ಮತ್ತು ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದುರಂತ ಸಂಭವಿಸಿದೆ ಎಂಬ ರಶ್ಯದ ವರದಿ ಅಸಂಬದ್ಧ ಎಂದು ಟೀಕಿಸಿದ ಅವರು, ವಿಷಯವನ್ನು ಮುಚ್ಚಿಹಾಕುವ ಸ್ಪಷ್ಟ ಪ್ರಯತ್ನ ಇದಾಗಿದೆ ಎಂದು ಅಲಿಯೆವ್ ಹೇಳಿದ್ದಾರೆ.
ರಶ್ಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಅಲಿಯೆವ್ ಮಾಸ್ಕೋದ ಉನ್ನತ ವಿವಿಯಲ್ಲಿ ವ್ಯಾಸಂಗ ನಡೆಸಿದ್ದಾರೆ. `ವಿಮಾನ ಪತನಗೊಳ್ಳುವಲ್ಲಿ ತನ್ನ ತಪ್ಪನ್ನು ರಶ್ಯವು ಒಪ್ಪಿಕೊಳ್ಳಬೇಕು ಮತ್ತು ಇದಕ್ಕೆ ಹೊಣೆಗಾರರನ್ನು ಗುರುತಿಸಿ ಶಿಕ್ಷಿಸಬೇಕು' ಎಂದು ಅಝರ್ಬೈಜಾನ್ ಅಧ್ಯಕ್ಷರು ಆಗ್ರಹಿಸಿದ್ದಾರೆ.
57 ಪ್ರಯಾಣಿಕರಿದ್ದ ಅಝರ್ಬೈಜಾನ್ ಏರ್ಲೈನ್ಸ್ ವಿಮಾನವು ಅಕ್ಟೌ ಬಳಿ ಬುಧವಾರ ಪತನಗೊಂಡಿದ್ದು 38 ಪ್ರಯಾಣಿಕರು ಸಾವನ್ನಪ್ಪಿದ್ದರು. ಅಝರ್ಬೈಜಾನ್ ಏರ್ಲೈನ್ಸ್ ವಿಮಾನ ಅಪಘಾತ ಒಂದು ದುರಂತವಾಗಿದ್ದು ಅದಕ್ಕೆ ಕ್ಷಮೆ ಯಾಚಿಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಹೇಳಿಕೆ ನೀಡಿದ್ದರು.