ಫೆಲೆಸ್ತೀನ್: ಮೃತ ಮಹಿಳೆಯ ಗರ್ಭದಿಂದ ಹೊರ ತೆಗೆದ ಶಿಶು ನಂತರ ನಡೆದ ಇಸ್ರೇಲ್ ದಾಳಿಯಲ್ಲಿ ಸಾವು
Photo credit: Reuters
ಗಾಝಾ: ಗಾಝಾ ಪಟ್ಟಣದ ರಫಾ ಎಂಬಲ್ಲಿ ಇಸ್ರೇಲ್ ನಡೆಸಿದ ಭೀರಕ ದಾಳಿಯಲ್ಲಿ ಮೃತಪಟ್ಟ ಮಹಿಳೆಯ ಭ್ರೂಣದಿಂದ ಜನಿಸಿದ ಮಗು ಕೂಡಾ ಆ ಬಳಿಕ ನಡೆದ ದಾಳಿಯಲ್ಲಿ ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಪತಿ ಹಾಗೂ ಪುತ್ರಿಯ ಜತೆ ಹತ್ಯೆಯಾಗಿದ್ದ ಮಹಿಳೆಯ ಗರ್ಭದಿಂದ ಹೆಣ್ಣುಮಗು ಜನಿಸಿತ್ತು. ಆದರೆ ಎರಡು ಮನೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಂದೇ ಕುಟುಂಬದ 13 ಮಕ್ಕಳು ಸೇರಿದಂತೆ 19 ಮಂದಿ ಮೃತಪಟ್ಟಿದ್ದು, ಇದರಲ್ಲಿ ಈ ಮಗು ಕೂಡಾ ಸೇರಿದೆ ಎಂದು ಫೆಲೆಸ್ತೀನ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 1.4 ಕೆ.ಜಿ. ತೂಕವಿದ್ದ ಮಗುವನ್ನು ತುರ್ತು ಸಿಸೇರಿಯನ್ ನಡೆಸಿ ಹೊರತೆಗೆಯಲಾಗಿತ್ತು. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿತ್ತು ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಮುಹಮ್ಮದ್ ಸಲಾಮಾ ವಿವರಿಸಿದ್ದಾರೆ. ಮಗುವಿನ ತಾಯಿ ಸಬ್ರೀನ್ ಅಲ್-ಸಕಾನಿ 30 ವಾರಗಳ ಗರ್ಭಿಣಿಯಾಗಿದ್ದರು.
ರಫಾ ಅಸ್ಪತ್ರೆಯ ಇನ್ಕ್ಯುಬೇಟರ್ ನಲ್ಲಿ ಮತ್ತೊಂದು ಶಿಶುವಿನ ಜತೆಗೆ ಮಗುವನ್ನು ಬೆಳೆಸಲಾಗುತ್ತಿತ್ತು.
ಸಕಾನಿಯವರ ಮತ್ತೊಬ್ಬ ಪುತ್ರಿ ಮಲಕ್ ದಾಳಿಯಲ್ಲಿ ಮೃತಪಟ್ಟಿದ್ದು, ನವಜಾತ ಶಿಶುವಿಗೆ ರೂಹ್ ಎಂಬ ಹೆಸರಿಡಲು ನಿರ್ಧರಿಸಿದ್ದಳು ಎಂದು ಸಂಬಂಧಿ ರಮಿ ಅಲ್ ಶೇಕ್ ಹೇಳಿದ್ದಾರೆ. ಪುಟ್ಟ ಸಹೋದರಿ ಜಗತ್ತಿಗೆ ಬಂದ ಬಗ್ಗೆ ಮಲಕ್ ಸಂಭ್ರಮಿಸಿದ್ದಳು.