ಚೀನಾದ ಸೂಕ್ಷ್ಮ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕನ್ ಹೂಡಿಕೆಗೆ ನಿಷೇಧ: ಬೈಡನ್ ಆದೇಶ
ಇದು ‘ಜಾಗತೀಕರಣ ವಿರೋಧಿ’ಯೆಂದ ಚೀನಾ
Photo: PTI
ವಾಶಿಂಗ್ಟನ್: ಚೀನಾದ ಕೆಲವು ಸೂಕ್ಷ್ಮಸಂವೇದಿ ಹೈಟೆಕ್ ಕೈಗಾರಿಕಾ ವಲಯಗಳಲ್ಲಿ ಅಮೆರಿಕದ ಕಂಪೆನಿಗಳ ಹೂಡಿಕೆಗಳನ್ನು ನಿಷೇಧಿಸುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಕಾರ್ಯಕಾರಿ ಆದೇಶವೊಂದನ್ನು ಜಾರಿಗೊಳಿಸಿದ್ದಾರೆ. ಆದರೆ ಅಮೆರಿಕದ ಈ ನಡೆಯನ್ನು ಚೀನಾ ಖಂಡಿಸಿದ್ದು, ಇದು ‘ಜಾಗತೀಕರಣ ವಿರೋಧಿ’ಯೆಂದು ಟೀಕಿಸಿದೆ.
ಬೈಡನ್ ಸರಕಾರದ ನೂತನ ಆದೇಶವು ಮುಂದಿನ ವರ್ಷ ಜಾರಿಗೆ ಬರುವ ನಿರೀಕ್ಷೆಯಿದ್ದು, ಇದು ಚೀನಾದಲ್ಲಿ ಸೆಮಿಕಂಡಕ್ಟರ್ಗಳು ಹಾಗೂ ಕೃತಕ ಬುದ್ಧಿಮತ್ತೆಯಂತಹ ಮಹತ್ವದ್ನ ತಂತ್ರಜ್ಞಾನ ವಲಯಗಳಲ್ಲಿ ಅಮೆರಿಕದ ಹೂಡಿಕೆಯನ್ನು ನಿರ್ಬಂಧಿಸುತ್ತದೆ.
‘‘ಮುಕ್ತ ಹೂಡಿಕೆಯು ನಮ್ಮ ಆರ್ಥಿಕ ನೀತಿಯ ತಳಹದಿಯಾಗಿದೆ ಮತ್ತು ಅಮೆರಿಕಕ್ಕೆ ಗಣನೀಯವಾದ ಪ್ರಯೋಜನಗಳನ್ನು ಮಾಡಿಕೊಡುತ್ತದೆ. ಆದಾಗ್ಯೂ ನಿರ್ದಿಷ್ಟ ಸೂಕ್ಷ್ಮ ಸಂವೇದಿ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಉತ್ಪಾದನೆಗಾಗಿ ಅಮೆರಿನ್ ಕಂಪೆನಿಗಳುು ಕೆಲವು ದೇಶಗಳಲ್ಲಿ ಮಾಡುವ ನಿರ್ದಿಷ್ಟ ಹೂಡಿಕೆಗಳನ್ನು ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಸಾಮರ್ಥ್ಯವನ್ನು ಮಣಿಸಲು ಬಳಸುವ ಸಾಧ್ಯತೆಯಿದೆ’’ ಎಂದು ಕಾರ್ಯಕಾರಿ ಆದೇಶವನ್ನು ಪ್ರಕಟಿಸಿ, ಕಾಂಗ್ರೆಸ್ ನಾಯಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಚೀನಾದಲ್ಲಿ ಸುಧಾರಿತ ಸೆಮಿಕಂಡಕ್ಟರ್ಗಳ ಉತ್ಪಾದನಾ ಕ್ಷೇತ್ರದಲ್ಲಿ ಜಂಟಿ ಹೂಡಿಕೆ, ನೂತನ ಖಾಸಗಿ ಶೇರು ಖರೀದಿ, ಔದ್ಯಮಿಕ ಬಂಡವಾಳ ಹಾಗೂ ಜಂಟಿ ಉದ್ಯಮ ಹಾಗೂ ಕ್ವಾಂಟಮ್ ಮಾಹಿತಿ ತಂತ್ರಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕನ್ ಕಂಪೆನಿಗಳ ಹೂಡಿಕೆಯನ್ನು ಈ ಆದೇಶವು ನಿಷೇಧಿಸುತ್ತದೆ.