ಬಾಂಗ್ಲಾ: ಹಿಂಸಾಚಾರದಲ್ಲಿ ಮೃತರ ಸಂಖ್ಯೆ 39ಕ್ಕೆ ಏರಿಕೆ
► ಢಾಕಾದಲ್ಲಿ ರ್ಯಾಲಿಗೆ ನಿಷೇಧ; ಟಿವಿ ಚಾನೆಲ್ ಪ್ರಸಾರ ಸ್ಥಗಿತ ► 30 ಪತ್ರಕರ್ತರು, 104 ಪೊಲೀಸರು, 400 ವಿದ್ಯಾರ್ಥಿಗಳಿಗೆ ಗಾಯ
PC : PTI
ಢಾಕಾ : ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 39ಕ್ಕೇರಿದೆ. ಸುಮಾರು 400 ವಿದ್ಯಾರ್ಥಿಗಳು, 30ಕ್ಕೂ ಅಧಿಕ ಪತ್ರಕರ್ತರು, 104 ಪೊಲೀಸರು ಗಾಯಗೊಂಡಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ರಾಜಧಾನಿ ಢಾಕಾದಲ್ಲಿ ಎಲ್ಲಾ ರೀತಿಯ ರ್ಯಾಲಿಗಳು ಹಾಗೂ ಮೆರವಣಿಗೆಯನ್ನು ನಿಷೇಧಿಸಿರುವುದಾಗಿ ಢಾಕಾ ಮೆಟ್ರೊಪಾಲಿಟನ್ ಪೊಲೀಸ್ (ಡಿಎಂಪಿ) ಹೇಳಿದೆ. ಬಾಂಗ್ಲಾದೇಶದ ಟಿವಿ ಚಾನೆಲ್ಗಳ ಪ್ರಸಾರ ಸ್ಥಗಿತಗೊಂಡಿದ್ದು ಹಲವು ದಿನಪತ್ರಿಕೆಗಳ ವೆಬ್ಸೈಟ್, ಸಾಮಾಜಿಕ ಮಾಧ್ಯಮ ಖಾತೆಗಳು ನಿಷ್ಕ್ರಿಯಗೊಂಡಿವೆ. ಸಾಗರೋತ್ತರ ದೂರವಾಣಿ ಮತ್ತು ಇಂಟರ್ನೆಟ್ ಕರೆಗಳೂ ವಿಫಲಗೊಂಡಿದ್ದು ವಿಪಕ್ಷದ ಪ್ರಮುಖ ಮುಖಂಡರನ್ನು ಬಂಧಿಸಲಾಗಿದೆ ಎಂದು `ರಾಯ್ಟರ್ಸ್' ವರದಿ ಮಾಡಿದೆ.
ಸರಕಾರಿ ಉದ್ಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ 30% ಮೀಸಲಾತಿ ನೀಡುವ ಸರಕಾರದ ಯೋಜನೆಯನ್ನು ವಿರೋಧಿಸಿ ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪ್ರಧಾನಿ ಶೇಖ್ ಹಸೀನಾ ಅವರ `ಅವಾಮಿ ಲೀಗ್' ಪಕ್ಷದ ವಿದ್ಯಾರ್ಥಿ ಸದಸ್ಯರು ಹಾಕಿ ಸ್ಟಿಕ್, ದೊಣ್ಣೆ, ಇಟ್ಟಿಗೆ, ಕಬ್ಬಿಣದ ರಾಡ್ನಿಂದ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರನ್ನು ಬಂಧಿಸದೆ ಪೊಲೀಸರು ಪಕ್ಷಪಾತ ತೋರಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ 1971ರ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡವರ ಮಕ್ಕಳನ್ನು ಒಳಗೊಂಡಂತೆ ನಿರ್ದಿಷ್ಟ ಗುಂಪುಗಳಿಗೆ ನಾಗರಿಕ ಸೇವಾ ಹುದ್ದೆಗಳಲ್ಲಿ 50%ಕ್ಕಿಂತ ಹೆಚ್ಚು ಸ್ಥಾನವನ್ನು ಮೀಸಲಿಡುವ ವ್ಯವಸ್ಥೆಯನ್ನು ವಿರೋಧಿಸಿ ಕಳೆದ ವಾರದಿಂದಲೂ ಪ್ರತಿಭಟನೆ ನಡೆಯುತ್ತಿದೆ. ಪ್ರಧಾನಿ ಶೇಖ್ ಹಸೀನಾ ಅವರನ್ನು ಬೆಂಬಲಿಸುವವರ ಮಕ್ಕಳು ಈ ಯೋಜನೆಯ ಪ್ರಮುಖ ಫಲಾನುಭವಿಗಳು ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಪ್ರತಿಭಟನೆ, ಘರ್ಷಣೆ, ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೇರಿದೆ. 30ಕ್ಕೂ ಅಧಿಕ ಪತ್ರಕರ್ತರು, 104 ಪೊಲೀಸರು, ಸುಮಾರು 400 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದುವರೆಗೆ ವರದಿಯಾದ ಕನಿಷ್ಟ ಮೂರನೇ ಎರಡರಷ್ಟು ಸಾವುಗಳಿಗೆ ಪೊಲೀಸ್ ಗುಂಡಿನ ದಾಳಿ ಕಾರಣವಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ಬಾಂಗ್ಲಾದೇಶದ 64 ಜಿಲ್ಲೆಗಳಲ್ಲಿ 50%ಕ್ಕೂ ಅಧಿಕ ಜಿಲ್ಲೆಗಳಲ್ಲಿ ಪ್ರಮುಖ ಹೆದ್ದಾರಿ, ರಸ್ತೆಗಳಲ್ಲಿ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಪ್ರತಿಭಟನಾ ನಿರತರು ಟೈರ್ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದ್ದರೆ ಇನ್ನು ಕೆಲವು ಜಿಲ್ಲೆಗಳಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಎಲ್ಲಾ ಶಾಲೆ, ಕಾಲೇಜುಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೊಬೈಲ್ ಇಂಟರ್ನೆಟ್ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಸರಕಾರ ಹೇಳಿದೆ.
ಬಾಂಗ್ಲಾದಲ್ಲಿರುವ ಭಾರತೀಯ ಪ್ರಜೆಗಳು ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ನೀಡುವ ಸಲಹೆ, ಸೂಚನೆಯನ್ನು ಪಾಲಿಸುವಂತೆ ವಿದೇಶಾಂಗ ಇಲಾಖೆ ಶುಕ್ರವಾರ ನಿರ್ದೇಶಿಸಿದೆ. ತುರ್ತು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸುವಂತೆ ಆಗ್ರಹಿಸಿದೆ. ಯಾವುದೇ ನೆರವು ಬೇಕಿದ್ದರೂ ಹೈಕಮಿಷನ್ ಮತ್ತು ಸಹಾಯಕ ಹೈಕಮಿಷನ್ನ ಸಹಾಯವಾಣಿ ನಂಬರ್ಗೆ ಕರೆ ಮಾಡುವಂತೆ ತಿಳಿಸಿದೆ.
ಮಾತುಕತೆಗೆ ಸಿದ್ಧ: ಕಾನೂನು ಸಚಿವ
ಪ್ರತಿಭಟನಾ ನಿರತರ ಜತೆ ಮಾತುಕತೆಗೆ ಸರಕಾರ ಸಿದ್ಧವಿದೆ ಎಂದು ಕಾನೂನು ಸಚಿವ ಅನೀಸುಲ್ ಹಕ್ ಹೇಳಿರುವುದಾಗಿ ಎಎಫ್ಪಿ ವರದಿ ಮಾಡಿದೆ. `ತಾವೂ ಮಾತುಕತೆಗೆ ಸಿದ್ಧರಿದ್ದೇವೆ. ಆದರೆ ಮಾತುಕತೆ ಮತ್ತು ಗುಂಡಿನ ದಾಳಿ ಏಕಕಾಲದಲ್ಲಿ ನಡೆಯಲು ಸಾಧ್ಯವಿಲ್ಲ. ಮಾತುಕತೆ ನಡೆಸಲು ಮೃತದೇಹಗಳನ್ನು ತುಳಿದುಕೊಂಡು ಹೋಗಲು ಸಾಧ್ಯವಿಲ್ಲ' ಎಂದು ಪ್ರತಿಭಟನೆಯ ಸಂಯೋಜಕ ನಹೀದ್ ಇಸ್ಲಾಂ ಪ್ರತಿಕ್ರಿಯಿಸಿದ್ದಾರೆ. ಸರಕಾರ ಮೀಸಲಾತಿ ಯೋಜನೆಯನ್ನು ಹಿಂದಕ್ಕೆ ಪಡೆಯುವವರೆಗೆ ಪ್ರತಿಭಟನೆ ಮುಂದುವರಿಯುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.
ಶುಕ್ರವಾರ ಹಲವೆಡೆ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಹಲವು ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದಲ್ಲಿ ನಿರತರಾದವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಬಳಸಿದಾಗ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.