ಬಾಂಗ್ಲಾ: ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಢಾಕ: ಪ್ರಧಾನಿ ಶೇಖ್ ಹಸೀನಾ ಪದತ್ಯಾಗ ಮಾಡಿ ದೇಶದಲ್ಲಿ ತಟಸ್ಥ ಸರಕಾರದ ಅಡಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಬಾಂಗ್ಲಾದೇಶದ ರಾಜಧಾನಿ ಡಾಕಾದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.
ಪ್ರಮುಖ ವಿಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ) ಮತ್ತು ಜಮಾಅತೆ ಇಸ್ಲಾಮಿ ಪಕ್ಷದ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸುಮಾರು 10,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು ಬಾಂಗ್ಲಾದಲ್ಲಿ ಈ ವರ್ಷ ನಡೆದ ಅತೀ ದೊಡ್ಡ ಪ್ರತಿಭಟನೆಯಾಗಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
15 ವರ್ಷದಿಂದ ಬಾಂಗ್ಲಾದಲ್ಲಿ ಅಧಿಕಾರದಲ್ಲಿರುವ ಶೇಖ್ ಹಸೀನಾ ಆಡಳಿತದಲ್ಲಿ ದೇಶ ಗಮನಾರ್ಹ ಆರ್ಥಿಕ ಪ್ರಗತಿಯನ್ನು ದಾಖಲಿಸಿದ್ದು ತಲಾವಾರು ಜಿಡಿಪಿಯಲ್ಲಿ ಬಾಂಗ್ಲಾ ನೆರೆಯ ಭಾರತವನ್ನು ಹಿಂದಿಕ್ಕಿದೆ. ಆದರೆ ಹಣದುಬ್ಬರ ಏರಿದ್ದು ಸರಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಮಾನವಹಕ್ಕುಗಳ ಉಲ್ಲಂಘನೆ ಆರೋಪ ಕೇಳಿಬಂದಿದೆ. ಈ ಮಧ್ಯೆ, ಭ್ರಷ್ಟಾಚಾರ ಪ್ರಕರಣದಲ್ಲಿ ಗೃಹಬಂಧನ ಶಿಕ್ಷೆಯಲ್ಲಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಿಎನ್ಪಿ ಪಕ್ಷ ಸರಕಾರದ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿ ಒತ್ತಡ ಹೇರುತ್ತಿದೆ.
ಮತಗಳನ್ನು ಕದ್ದು ಅಧಿಕಾರಕ್ಕೆ ಬಂದಿರುವ ಶೇಖ್ ಹಸೀನಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸುಮಾರು 10,000 ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಬುಲೆಟ್ ಪ್ರಯೋಗಿಸಿದಾಗ ನಡೆದ ಘರ್ಷಣೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಬಿಎನ್ಪಿಯ ಸುಮಾರು 200 ಬೆಂಬಲಿಗರನ್ನು ಬಂಧಿಸಲಾಗಿದೆ ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ ವಕ್ತಾರ ಫಾರುಕ್ ಹುಸೈನ್ರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.