ಬಾಂಗ್ಲಾ | ವಿದ್ಯಾರ್ಥಿಗಳ ಪ್ರತಿಭಟನೆ 48 ಗಂಟೆ ಸ್ಥಗಿತ
ಕರ್ಫ್ಯೂ ರದ್ದತಿಗೆ ಆಗ್ರಹ, ಮೃತರ ಸಂಖ್ಯೆ 163ಕ್ಕೆ ಏರಿಕೆ
PC : PTI
ಢಾಕಾ : ಹಿಂಸಾಚಾರದಿಂದ ಅಪಾರ ಸಾವು-ನೋವು ಉಂಟಾಗಿರುವುದರಿಂದ ಮೀಸಲಾತಿ ಮಸೂದೆ ರದ್ದತಿಗೆ ಆಗ್ರಹಿಸಿ ದೇಶದಾದ್ಯಂತ ನಡೆಸುತ್ತಿರುವ ಪ್ರತಿಭಟನೆಯನ್ನು ಸೋಮವಾರದಿಂದ 48 ಗಂಟೆ ಸ್ಥಗಿತಗೊಳಿಸುವುದಾಗಿ ಬಾಂಗ್ಲಾದೇಶದ ವಿದ್ಯಾರ್ಥಿಗಳ ಗುಂಪು ಹೇಳಿದೆ.
` ಈ ರೀತಿಯ ರಕ್ತಪಾತದ ನಡುವೆ ನಾವು ಸುಧಾರಣೆಯನ್ನು ಬಯಸಲಿಲ್ಲ. ಆದ್ದರಿಂದ ಸೋಮವಾರದಿಂದ 48 ಗಂಟೆ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗುವುದು. ಈ ಅವಧಿಯಲ್ಲಿ ಸರಕಾರ ಕರ್ಫ್ಯೂ ವಾಪಾಸು ಪಡೆಯಬೇಕು, ಇಂಟರ್ ನೆಟ್ ಮರುಸ್ಥಾಪಿಸಬೇಕು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸಬೇಕು' ಎಂದು ಪ್ರತಿಭಟನೆಯ ಮುಖ್ಯ ಸಂಘಟಕ `ತಾರತಮ್ಯದ ವಿರುದ್ಧ ವಿದ್ಯಾರ್ಥಿಗಳು' ಸಂಘಟನೆಯ ಉನ್ನತ ಮುಖಂಡ ನಹೀದ್ ಇಸ್ಲಾಮ್ ಆಗ್ರಹಿಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಆಗ್ರಹಿಸಿ ನಾವು ಈ ಚಳವಳಿಯನ್ನು ಆರಂಭಿಸಿದ್ದೆವು. ಆದರೆ ಇಷ್ಟೊಂದು ಪ್ರಮಾಣದಲ್ಲಿ ರಕ್ತಪಾತ, ಕೊಲೆ, ವ್ಯಾಪಕ ಹಾನಿಯ ಮೂಲಕ ಮೀಸಲಾತಿ ಸುಧಾರಣೆಯನ್ನು ನಾವು ಬಯಸಿಲ್ಲ ಎಂದವರು ಹೇಳಿದ್ದಾರೆ. ದೇಶದಲ್ಲಿ ಸೋಮವಾರ ಶಾಂತಿ ನೆಲೆಸಿದೆ. ಹಲವೆಡೆ ಸಣ್ಣಪುಟ್ಟ ಘರ್ಷಣೆ ಹೊರತುಪಡಿಸಿದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. 500ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಮಧ್ಯೆ , ಹಿಂಸಾಚಾರ, ಘರ್ಷಣೆಯಲ್ಲಿ ಹಲವು ಪೊಲೀಸ್ ಅಧಿಕಾರಿಗಳ ಸಹಿತ ಕನಿಷ್ಠ 163 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರವೂ ಹಲವೆಡೆ ಹಿಂಸಾಚಾರ ಮುಂದುವರಿದಿದ್ದು ಗುಂಡೇಟಿನಿಂದ ತೀವ್ರ ಗಾಯಗೊಂಡ ನಾಲ್ವರನ್ನು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ವಿದ್ಯಾರ್ಥಿಗಳ ವ್ಯಾಪಕ ಪ್ರತಿಭಟನೆಯನ್ನು ನಿಯಂತ್ರಿಸಲು ಬಾಂಗ್ಲಾದೇಶದ ಅಧಿಕಾರಿಗಳು ಅನಗತ್ಯ ಬಲ ಪ್ರಯೋಗಿಸಿದ್ದಾರೆ ಎಂದು ಬಾಂಗ್ಲಾದೇಶದಲ್ಲಿರುವ ರಾಜತಾಂತ್ರಿಕರು ಕಳವಳ ವ್ಯಕ್ತಪಡಿಸಿದ್ದಾರೆ. ರವಿವಾರ ಢಾಕಾದಲ್ಲಿ ವಿದೇಶಾಂಗ ಇಲಾಖೆ ಎಲ್ಲಾ ರಾಜತಾಂತ್ರಿಕರಿಗೂ ಪ್ರತಿಭಟನೆಗೆ ಸಂಬಂಧಿಸಿದ 15 ನಿಮಿಷದ ವೀಡಿಯೊವನ್ನು ಪ್ರದರ್ಶಿಸಿ, ಪೊಲೀಸರು ಕೈಗೊಂಡ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದರು. `ಆದರೆ ಪೊಲೀಸರು ಘಟನೆಯ ಏಕಪಕ್ಷೀಯ ಆವೃತ್ತಿಯನ್ನು ಮಾತ್ರ ಪ್ರಸ್ತುತಪಡಿಸಿದ್ದಾರೆ. ಪೊಲೀಸರು ನಿರಾಯುಧ ಪ್ರತಿಭಟನಾಕಾರರ ಮೇಲೆ ಗೋಲೀಬಾರು ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಅದನ್ನು ಅಧಿಕಾರಿಗಳು ಮರೆಮಾಚಿದ್ದಾರೆ' ಎಂದು ಬಾಂಗ್ಲಾದೇಶಕ್ಕೆ ಅಮೆರಿಕದ ರಾಯಭಾರಿ ಪೀಟರ್ ಹ್ಯಾಸ್ ಪ್ರತಿಕ್ರಿಯಿಸಿದ್ದಾರೆ.
ದೇಶವನ್ನು ಘಾಸಿಗೊಳಿಸಿರುವ ಮಾರಣಾಂತಿಕ ಹಿಂಸಾಚಾರವನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕೆಂದು ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅಂತರರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ. ಪ್ರತಿಭಟಿಸುವ ಹಕ್ಕನ್ನು ಚಲಾಯಿಸುತ್ತಿರುವವರ ವಿರುದ್ಧದ ಹಿಂಸಾಚಾರವನ್ನು ಕೊನೆಗೊಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವಂತೆ ಜಾಗತಿಕ ಮುಖಂಡರು ಮತ್ತು ವಿಶ್ವಸಂಸ್ಥೆಯನ್ನು ಕೋರುತ್ತೇನೆ. ಹಿಂಸಾಚಾರದಲ್ಲಿ ನಡೆದಿರುವ ಸಾವು-ನೋವಿನ ಬಗ್ಗೆಯೂ ತನಿಖೆ ನಡೆಯಬೇಕು' ಎಂದವರು ಹೇಳಿದ್ದಾರೆ.
► ವಿಪಕ್ಷ ಮುಖಂಡರ ಸಹಿತ ಕನಿಷ್ಠ 532 ಮಂದಿ ಬಂಧನ
ಪ್ರತಿಭಟನೆಯ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಸೋಮವಾರ ಬೆಳಗ್ಗಿನವರೆಗೆ ಕನಿಷ್ಠ 532 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಮುಖ ವಿರೋಧ ಪಕ್ಷ ಬಿಎನ್ಪಿಯ ಮುಖಂಡರೂ ಸೇರಿದ್ದಾರೆ ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ ವಕ್ತಾರ ಫಾರುಕ್ ಹುಸೈನ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ)ಯ ಹಿರಿಯ ಮುಖಂಡರಾದ ಅಮೀರ್ ಮಹ್ಮೂದ್ ಚೌಧರಿ, ಅಮೀನುಲ್ ಹಕ್, ವಕ್ತಾರ ರುಹುಲ್ ಕಬೀರ್ ರಿಝ್ವಿ ಅಹ್ಮದ್, ಜಮಾತೆ ಇಸ್ಲಾಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮಿಯಾ ಗುಲಾಮ್ ಪರ್ವಾರ್ ಮುಂತಾದ ಮುಖಂಡರನ್ನು ಬಂಧಿಸಲಾಗಿದೆ.