ಬಾಂಗ್ಲಾದೇಶ: ಮತ್ತೆ ಮೂರು ವಿಪಕ್ಷ ಮುಖಂಡರ ಬಂಧನ
ಢಾಕ, ನ.3: ಪ್ರತಿಭಟನೆ ನಡೆಸುತ್ತಿರುವವರ ಜತೆ ಮಾತುಕತೆ ಸಾಧ್ಯವಿಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಖಡಾಖಂಡಿತವಾಗಿ ಹೇಳಿರುವಂತೆಯೇ ಶುಕ್ರವಾರ ಪ್ರಮುಖ ವಿಪಕ್ಷದ ಮೂವರು ಮುಖಂಡರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
2009ರಿಂದ ಪ್ರಧಾನಿಯಾಗಿರುವ ಶೇಖ್ ಹಸೀನಾ ತಕ್ಷಣ ರಾಜೀನಾಮೆ ನೀಡಿ ದೇಶದಲ್ಲಿ ಕ್ಷಿಪ್ರವಾಗಿ ಸಾರ್ವತ್ರಿಕ ಚುನಾವಣೆ ನಡೆಸಬೇಕೆಂದು ಪ್ರಮುಖ ವಿರೋಧ ಪಕ್ಷವಾಗಿರುವ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ(ಬಿಎನ್‍ಪಿ) ಸೇರಿದಂತೆ ವಿಪಕ್ಷಗಳು ಆಗ್ರಹಿಸುತ್ತಿವೆ. ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಕಳೆದ ರವಿವಾರ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಗೆ ಸಂಬಂಧಿಸಿ ಮಾಜಿ ಸಚಿವ ಅಮೀರ್ ಖುಸ್ರು ಸೇರಿದಂತೆ ಬಿಎನ್‍ಪಿಯ ನೂರಾರು ಹಿರಿಯ ಸದಸ್ಯರನ್ನು ಸರಕಾರ ಬಂಧಿಸಿದೆ. ಗುರುವಾರ ರಾತ್ರಿ ಪಕ್ಷದ ವಕ್ತಾರ ಝಾಹಿರ್ ಸ್ವಪನ್, ಬಿಎನ್‍ಪಿ ಢಾಕಾ ಘಟಕದ ಅಧ್ಯಕ್ಷ ಅಮೀನುಲ್ ಹಕ್, ಉನ್ನತ ಮುಖಂಡ ಮಿರ್ಝಾ ಫಕ್ರುಲ್‍ರನ್ನು ಬಂಧಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಈ ಮಧ್ಯೆ, ವಿಪಕ್ಷಗಳ ಜತೆ ಮಾತುಕತೆ ಸಾಧ್ಯವಿಲ್ಲ ಎಂದು ಪ್ರಧಾನಿ ಹಸೀನಾ ಹೇಳಿದ್ದಾರೆ. ಗುರುವಾರ ಸಂಸತ್‍ನಲ್ಲಿ ಮಾತನಾಡಿದ ಅವರು ` ಈ ಮೃಗಗಳ ಜತೆ ಮಾತನಾಡಲು ಬಯಸುವುದಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.