ಬಾಂಗ್ಲಾದೇಶ: 40% ಮತದಾನ, ಮತ ಎಣಿಕೆ ಆರಂಭ
Photo: PTI
ಢಾಕಾ : ಬಾಂಗ್ಲಾದೇಶದಲ್ಲಿ ಪ್ರಮುಖ ವಿಪಕ್ಷಗಳ ಬಹಿಷ್ಕಾರದ ನಡುವೆ ರವಿವಾರ ಸಾರ್ವತ್ರಿಕ ಚುನಾವಣೆಗೆ ನಡೆದ ಮತದಾನದಲ್ಲಿ 40% ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕೆಲವು ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ವರದಿಯಾಗಿದೆ.
ರವಿವಾರ ಸಂಜೆ 4 ಗಂಟೆಗೆ ಮತದಾನ ಮುಕ್ತಾಯ ಆಗುತ್ತಿದ್ದಂತೆಯೇ ಮತಗಳ ಎಣಿಕೆ ಪ್ರಾರಂಭವಾಗಿದ್ದು, ಸೋಮವಾರ ಸಂಜೆಯ ವೇಳೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. 2018ರ ಚುನಾವಣೆಯಲ್ಲಿ 80% ಮತದಾನವಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
12ನೇ ಸಂಸದೀಯ ಚುನಾವಣೆಯಲ್ಲಿ 40%ದಷ್ಟು ಮತದಾನವಾಗಿದೆ. ಸಂಜೆ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ದೇಶದಾದ್ಯಂತದ ಮತಗಟ್ಟೆಗಳಲ್ಲಿ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ಪ್ರಾರಂಭವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಕಾಝಿ ಹಬೀಬುಲ್ ಅವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುಮಾರು 119 ದಶಲಕ್ಷ ಜನರು ದೇಶಾದ್ಯಂತ 42,000ಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದರು. ಸುಮಾರು 7 ಲಕ್ಷ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು 200ಕ್ಕೂ ಅಧಿಕ ವಿದೇಶಿ ವೀಕ್ಷಕರು ಚುನಾವಣೆಯ ಮೇಲೆ ನಿಗಾ ವಹಿಸಿದ್ದಾರೆ ಎಂದು ಆಯೋಗ ಹೇಳಿದೆ.
ಈ ಮಧ್ಯೆ ಕಾನೂನು ಜಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಚಿತ್ತಗಾಂಗ್-16 ಕ್ಷೇತ್ರದ ಅಭ್ಯರ್ಥಿ, ಬಾಂಗ್ಲಾದೇಶ್ ಅವಾಮಿ ಲೀಗ್ ಮುಖಂಡ ಮುಸ್ತಫಿಝುರ್ ರಹ್ಮಾನ್ ಅವರ ಉಮೇದುವಾರಿಕೆಯನ್ನು ಚುನಾವಣಾ ಆಯೋಗ ರದ್ದುಪಡಿಸಿದೆ. ಮತಗಟ್ಟೆಯಲ್ಲಿ ಅಕ್ರಮ, ನಕಲಿ ಮತದಾನ ನಡೆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ 8 ಅಭ್ಯರ್ಥಿಗಳು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಮುಖ ವಿಪಕ್ಷಗಳ ಬಹಿಷ್ಕಾರದ ಹಿನ್ನೆಲೆಯಲ್ಲಿ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಸತತ 4ನೇ ಬಾರಿ ಮತ್ತು ಒಟ್ಟು 5ನೇ ಬಾರಿ ಅಧಿಕಾರ ಪಡೆಯುವುದು ಬಹುತೇಕ ನಿಚ್ಚಳವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.