ಬಾಂಗ್ಲಾದೇಶ ಬ್ಯಾಂಕ್ ಗವರ್ನರ್ ರಾಜೀನಾಮೆ
ಅಬ್ದುರ್ ರೌಫ್ ತಾಲೂಕ್ದಾರ್ | PC : NDTV
ಢಾಕಾ : ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಯ ಬಳಿಕವೂ ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರ ಆಕ್ರೋಶ ತಣ್ಣಗಾಗಿಲ್ಲ. ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚುತ್ತಿರುವ ನಡುವೆಯೇ ಬಾಂಗ್ಲಾದೇಶ ಬ್ಯಾಂಕ್ ಗವರ್ನರ್ ಅಬ್ದುರ್ ರೌಫ್ ತಾಲೂಕ್ದಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
ತಮ್ಮ ರಾಜೀನಾಮೆಯನ್ನು ವಿತ್ತ ಇಲಾಖೆಗೆ ಸಲ್ಲಿಸಿದ್ದು ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡುವುದಾಗಿ ಉಲ್ಲೇಖಿಸಿದ್ದಾರೆ ಎಂದು `ದಿ ಢಾಕಾ ಟ್ರಿಬ್ಯೂನ್' ಶುಕ್ರವಾರ ವರದಿ ಮಾಡಿದೆ. ಅವಾಮಿ ಲೀಗ್ ನೇತೃತ್ವದ ಸರಕಾರ ಪತನಗೊಂಡ ಬಳಿಕ ಹಲವು ಸರಕಾರಿ ಮತ್ತು ಅರೆ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ.
ಹಸೀನಾ ಆಡಳಿತದ ಅವಧಿಯಲ್ಲಿ ಬ್ಯಾಂಕಿಂಗ್ ಮತ್ತು ಆರ್ಥಿಕ ಸಂಸ್ಥೆಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ನಡುವೆಯೇ ಬಾಂಗ್ಲಾದೇಶ ಬ್ಯಾಂಕ್ನ ನಾಲ್ವರು ಸಹಾಯಕ ಗವರ್ನರ್ ಗಳೂ ರಾಜೀನಾಮೆ ಸಲ್ಲಿಸಲು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.