ಸಾರ್ವತ್ರಿಕ ಚುನಾವಣೆ: ಬಾಂಗ್ಲಾದಲ್ಲಿ ಸೇನೆ ನಿಯೋಜನೆ
Photo Credit: Reuters
ಢಾಕ: ಜನವರಿ 7ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ವಿಪಕ್ಷಗಳ ಬಹಿಷ್ಕಾರದ ನಡುವೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಭದ್ರತಾ ವ್ಯವಸ್ಥೆಯನ್ನು ಬುಧವಾರದಿಂದ ಸೇನೆಗೆ ವಹಿಸಲಾಗಿದೆ ಎಂದು ವರದಿಯಾಗಿದೆ.
ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಉಸ್ತುವಾರಿ ಸರಕಾರದ ನೇತೃತ್ವದಲ್ಲಿ ಚುನಾವಣೆ ನಡೆಯಬೇಕು ಎಂದು ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ) ಸೇರಿದಂತೆ ಪ್ರಮುಖ ವಿಪಕ್ಷಗಳ ಆಗ್ರಹವನ್ನು ಸರಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಪ್ರಧಾನಿ ಹಸೀನಾರ ಗೆಲುವು ಸುಲಭ ಎಂದು ನಿರೀಕ್ಷಿಸಲಾಗಿದೆ. ಬಾಂಗ್ಲಾದಲ್ಲಿ ಸುಮಾರು 170 ದಶಲಕ್ಷ ಮತದಾರರು ಮತದಾನದ ಹಕ್ಕನ್ನು ಹೊಂದಿದ್ದಾರೆ.
ಮತದಾನಕ್ಕೂ ಮುನ್ನ ಕಾನೂನು ಸುವ್ಯವಸ್ಥೆಯನ್ನು ಖಾತರಿಪಡಿಸಲು ಜನವರಿ 3ರಿಂದ 10ರವರೆಗೆ ದೇಶದಾದ್ಯಂತ ಸೇನೆಯನ್ನು ನಿಯೋಜಿಸಲಾಗಿದೆ. 62 ಜಿಲ್ಲೆಗಳಲ್ಲಿ ಸೇನಾ ತುಕಡಿ, ಸುಮಾರು 100 ಉಪ ಜಿಲ್ಲೆಗಳಲ್ಲಿ ಅರೆಸೇನಾ ಪಡೆ ಭದ್ರತೆಯ ಹೊಣೆಯನ್ನು ನಿರ್ವಹಿಸಲಿದೆ. ತುರ್ತು ಸಂದರ್ಭದಲ್ಲಿ ನೆರವಿಗೆ ಹಲವಾರು ಹೆಲಿಕಾಪ್ಟರ್ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.